April 16, 2026
Thursday, April 16, 2026
spot_img

ಕಾರೊಳಗೆ ಯುವ ಪ್ರೇಮಿಗಳ ಮೃತದೇಹ ಪತ್ತೆ: ಸಾವಿಗೆ ಬ್ರೇಕ್ ಆಪ್ ಕಾರಣವೇ? ವ್ಯಾಟ್ಸ್‌ಆ್ಯಪ್‌ ನಲ್ಲಿ ಏನಿತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಉತ್ತರ ಪ್ರದೇಶದ ನೋಯ್ಡಾದಲ್ಲಿ ರಸ್ತೆ ಬದಿ ಪಾರ್ಕ್‌ ಮಾಡಿದ ಕಾರೊಳಗೆ ಯುವ ಪ್ರೇಮಿಗಳ ಮೃತದೇಹ ಪತ್ತೆಯಾಗಿದೆ .
ಪ್ರೇಮಿಗಳ ದಿನದಂದೇ ಬಾಳಿ ಬದುಕಬೇಕಿದ್ದ ಪ್ರೇಮಿಗಳು ಸಾವಿಗೆ ಶರಣಾಗಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಬಂದೂಕಿನಿಂದ ಹೊರ ಹೊಮ್ಮಿದ ಗುಂಡು 20 ವರ್ಷ ಆಸುಪಾಸಿನ ಪ್ರೇಮಿಗಳನ್ನು ಸಾವಿಗೆ ಕಾರಣವಾಗಿದ್ದು, ತನಿಖೆ ನಡೆಯುತ್ತಿದೆ.

ಮೃತರನ್ನು ಸುಮಿತ್‌ ಮತ್ತು ರೇಖಾ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್‌ 39 ಪ್ರದೇಶದಲ್ಲಿ ಪಾರ್ಕ್‌ ಮಾಡಲಾದ ಟಾಟಾ ಆಲ್ಟ್ರೋಝ್‌ ಕಾರ್‌ನಲ್ಲಿ ಗುಂಡಿನ ಗಾಯದಿಂದ ಅಸುನೀಗಿದ ಇವರು ಸಾರ್ವಜನಿಕರ ಕಣ್ಣಿಗೆ ಬಿದ್ದು, ಪೊಲೀಸರ ಗಮನಕ್ಕೆ ಸೆಳೆದರು.

ಪ್ರಾಥಮಿಕ ತನಿಖೆಯು ಪ್ರೀತಿಯಲ್ಲಿನ ಕಲಹವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಿತ್‌ನ ಕೈಯಲ್ಲಿ ಪಿಸ್ತೂಲ್‌ ಕಂಡು ಬಂದಿದ್ದು, ಆತನ ದೇಹ ಡ್ರೈವರ್‌ ಸೀಟ್‌ನಲ್ಲಿತ್ತು. ಕಾರ್‌ ಒಳಗಿನಿಂದ ಲಾಕ್‌ ಆಗಿತ್ತು. ಪೊಲೀಸರ ಪ್ರಕಾರ ಸುಮಿತ್‌ ಮೊದಲು ರೇಖಾಗೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕ್ಯಾಟ್ರಿಡ್ಜ್ ಕೂಡ ಕಾರೊಳಗೆ ಪತ್ತೆಯಾಗಿದೆ.

ರೇಖಾ ನೋಯ್ಡಾ ಸೆಕ್ಟರ್‌ 58ರ ನಿವಾಸಿ. ಇನ್ನು ಸುಮಿತ್‌ ದೆಹಲಿಯ ತ್ರಿಲೋಕಪುರಿಯಲ್ಲಿ ವಾಸಿಸುತ್ತಿದ್ದ. ಫೆಬ್ರವರಿ 13ರಂದು ಇವರಿಬ್ಬರು ಮನೆಯಿಂದ ನಾಪತ್ತೆಯಾಗಿದ್ದರು. ಮನೆಯವರು ನಾಪತ್ತೆ ದೂರನ್ನೂ ದಾಖಲಿಸಿದ್ದರು.

ಇತ್ತ ಕಾರೊಳಗೆ ಡೆತ್‌ ನೋಟ್‌ ಕೂಡ ಪತ್ತೆಯಾಗಿದೆ. ರೇಖಾ ಜತೆ ಕಳೆದ 15 ವರ್ಷಗಳಿಂದ ಪ್ರೀತಿಯಲ್ಲಿದ್ದೆ. ರೇಖಾ ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದಳು. ಆದರೆ ಇತ್ತೀಚೆಗೆ ಆಕೆ ಬೇರೆಯೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಾಳೆ ಎಂದು ಸುಮಿತ್‌ ಹೇಳಿದ್ದಾನೆ.

ʼಮೃತರ ಮನೆಯವರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಫೋರೆನ್ಸಿಕ್‌ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದೆ. ಮೃತದೇಹಗಳನ್ನು ಪೋಸ್ಟ್‌ ಮಾರ್ಟಂಗೆ ಕಳಿಸಲಾಗಿದೆʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಸುಮಿತ್‌ನ ವ್ಯಾಟ್ಸ್‌ಆ್ಯಪ್‌ ನಲ್ಲಿ ನಾನು ಸಾಯುತ್ತಿದ್ದೇನೆ. ಇದಕ್ಕೆ ರೇಖಾ ಕಾರಣ. ಅವಳು ಕಳೆದ 15 ವರ್ಷಗಳಿಂದ ನನ್ನೊಂದಿಗೆ ಇದ್ದಾಳೆ. ಮದುವೆಯಾಗುವುದಾಗಿಯೂ ತಿಳಿಸಿದ್ದಳು. ಆದರೆ ಇದೀಗ ಬೇರೊಬ್ಬನನ್ನು ವರಿಸಲು ಮುಂದಾಗಿದ್ದಾಳೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾಕೆಂದರೆ ರೇಖಾ ನನಗೆ ಮೋಸ ಮಾಡಿದ್ದಾಳೆ. ಇದೇ ಕಾರಣಕ್ಕೆ ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆʼ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !