ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ, ಮೈದಾನದ ಹೊರಗಿನ ವೈಯಕ್ತಿಕ ಏರಿಳಿತಗಳನ್ನು ಮೆಟ್ಟಿ ನಿಂತು ಬ್ಯಾಟಿಂಗ್ ಅಂಗಳದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸ್ಮೃತಿ ಈ ಅಮೋಘ ಸಾಧನೆ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 25 ರನ್ ಗಳಿಸುವ ಮೂಲಕ ಸ್ಮೃತಿ ಮಂಧಾನ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4000 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.
ವಿಶ್ವ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಮಂಧಾನ ಪಾಲಾಗಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್‌ನ ಅನುಭವಿ ಆಟಗಾರ್ತಿ ಸೂಜಿ ಬೇಟ್ಸ್ ಮಾತ್ರ ಈ ಗಡಿಯನ್ನು ದಾಟಿದ್ದರು. ಪ್ರಸ್ತುತ ಸ್ಮೃತಿ 154 ಪಂದ್ಯಗಳಿಂದ 4006 ರನ್ ಗಳಿಸಿ ಮಿಂಚುತ್ತಿದ್ದಾರೆ.
ಭಾರತೀಯ ಕ್ರಿಕೆಟ್‌ನ ಒಟ್ಟಾರೆ ಅಂಕಿಅಂಶಗಳನ್ನು ಗಮನಿಸಿದರೆ, ಟಿ20ಯಲ್ಲಿ 4000 ರನ್ ಗಳಿಸಿದ ಮೂರನೇ ಭಾರತೀಯ ಆಟಗಾರ್ತಿ ಇವರಾಗಿದ್ದಾರೆ.
ರೋಹಿತ್ ಶರ್ಮಾ: 4231 ರನ್
ವಿರಾಟ್ ಕೊಹ್ಲಿ: 4188 ರನ್
ಸ್ಮೃತಿ ಮಂಧಾನ: 4006 ರನ್
“ಟೀಮ್ ಇಂಡಿಯಾ ಜೆರ್ಸಿ ಧರಿಸಿದರೆ ನಾನು ವೈಯಕ್ತಿಕ ಜೀವನದ ಎಲ್ಲವನ್ನೂ ಮರೆತುಬಿಡುತ್ತೇನೆ” ಎಂಬ ತಮ್ಮ ಮಾತನ್ನು ಸ್ಮೃತಿ ಮೈದಾನದಲ್ಲಿ ಸಾಬೀತುಪಡಿಸಿದ್ದಾರೆ. ಮದುವೆ ರದ್ದಾದ ಸುದ್ದಿಗಳ ನಡುವೆಯೂ ವಿಚಲಿತರಾಗದೆ ಅವರು ಈ ದಾಖಲೆ ಬರೆದಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

