Monday, January 12, 2026
Monday, January 12, 2026
spot_img

ಮಗನಿಗಾಗಿ ‘ಮೊಬೈಲ್’ ಕಳ್ಳಸಾಗಣೆ: ತಾಯಿಯ ವಿಚಿತ್ರ ಐಡಿಯಾ ಕಂಡು ಪೊಲೀಸರೇ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಮತ್ತು ಸಿಮ್ ಕಾರ್ಡ್‌ಗಳ ಹಾವಳಿ ತಡೆಯಲು ಅಧಿಕಾರಿಗಳು ಹದ್ದಿನ ಕಣ್ಣಿಟ್ಟ ಬೆನ್ನಲ್ಲೇ, ಮಗನನ್ನು ನೋಡಲು ಬಂದ ತಾಯಿಯೊಬ್ಬರು ಅತ್ಯಂತ ವಿಚಿತ್ರವಾಗಿ ಮೊಬೈಲ್ ಸಾಗಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

ಜನವರಿ 02ರಂದು ಮಧ್ಯಾಹ್ನ ಸುಮಾರು 12:10ಕ್ಕೆ ಲಕ್ಷ್ಮೀ ನರಸಮ್ಮ (38) ಎಂಬುವವರು ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಭರತ್ ಎಂಬಾತನನ್ನು ಭೇಟಿ ಮಾಡಲು ಬಂದಿದ್ದರು. ಸಂದರ್ಶಕರ ಪಾಸ್ ಪಡೆದು ಸಾಮಾನ್ಯ ತಪಾಸಣಾ ವಿಭಾಗಕ್ಕೆ ಬಂದಾಗ ಅಲ್ಲಿ ಕರ್ತವ್ಯದಲ್ಲಿದ್ದ ಕೆಎಸ್​ಐಎಸ್​ಎಫ್ ಸಿಬ್ಬಂದಿ ಅವರು ಲಕ್ಷ್ಮೀ ನರಸಮ್ಮರನ್ನು ಕೂಲಂಕಷವಾಗಿ ತಪಾಸಣೆ ನಡೆಸಿದರು.

ತಪಾಸಣೆ ವೇಳೆ ಲಕ್ಷ್ಮೀ ನರಸಮ್ಮ ಅವರ ನಡವಳಿಕೆಯಲ್ಲಿ ಅನುಮಾನ ಕಂಡುಬಂದಿದೆ. ಅವರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಭೌತಿಕ ತಪಾಸಣೆ ನಡೆಸಿದಾಗ, ಅವರು ತಮ್ಮ ಖಾಸಗಿ ಭಾಗದಲ್ಲಿ (ಗುಪ್ತಾಂಗದಲ್ಲಿ) ನೀಲಿ ಬಣ್ಣದ ಬೇಸಿಕ್ ಮೊಬೈಲ್ ಮತ್ತು ಸಿಮ್ ಕಾರ್ಡ್ ಅಡಗಿಸಿಟ್ಟುಕೊಂಡಿರುವುದು ಪತ್ತೆಯಾಗಿದೆ. ಜೈಲಿನೊಳಗೆ ನಿಷೇಧಿತ ವಸ್ತುವನ್ನು ಅತ್ಯಂತ ಅಪಾಯಕಾರಿ ಮತ್ತು ಅನಿರೀಕ್ಷಿತ ರೀತಿಯಲ್ಲಿ ಸಾಗಿಸುತ್ತಿದ್ದನ್ನು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಕಾರಾಗೃಹದ ನಿಯಮಗಳನ್ನು ಗಾಳಿಗೆ ತೂರಿ, ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಲಕ್ಷ್ಮೀ ನರಸಮ್ಮ ಹಾಗೂ ಅವರಿಗೆ ಸಾಥ್ ನೀಡಿದ ಕೈದಿ ಮಗ ಭರತ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಪರಮೇಶ್ ಹೆಚ್.ಎ ಅವರ ಮಾರ್ಗದರ್ಶನದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Most Read

error: Content is protected !!