Friday, November 28, 2025

Snacks Series 2 | ಬಿಸಿಬಿಸಿಯಾಗಿ ತಿನ್ನೋಕೆ ಚೀಸ್ ಲಾಲಿಪಾಪ್ ಇದ್ರೆ ಸಾಕು! ಅಲ್ವಾ?

ಮಕ್ಕಳಿಗೆ ಸ್ಕೂಲ್ ನಿಂದ ಬಂದ ತಕ್ಷಣ ಕೊಡೋಕೆ ಸ್ನ್ಯಾಕ್ ಏನಾದರೂ ಬೇಕಾದರೆ, ಚೀಸ್ ಲಾಲಿಪಾಪ್ ಪರ್ಫೆಕ್ಟ್. ಹೊರಗೆ ಕ್ರಿಸ್ಪಿಯಾಗಿ, ಒಳಗೆ ಕರಗುವ ಚೀಸ್‌ನ ಸವಿಯ ಜೊತೆಗೆ ಇದು ಟೀ ಟೈಮ್‌ಗೂ, ಪಾರ್ಟಿಗೂ ಸೂಕ್ತವಾದ ಡಿಶ್. ಮನೆಯಲ್ಲಿ ಸರಳ ಪದಾರ್ಥಗಳಿಂದಲೇ ಹೋಟೆಲ್ ಸ್ಟೈಲ್ ಚೀಸ್ ಲಾಲಿಪಾಪ್ ಮಾಡೋದು ಹೇಗೆ ನೋಡೋಣ.

ಬೇಕಾಗುವ ಪದಾರ್ಥಗಳು

ಮೊಝಾರೆಲ್ಲಾ ಅಥವಾ ಪ್ರೊಸೆಸ್ಡ್ ಚೀಸ್ – 1 ಕಪ್
ಬೇಯಿಸಿದ ಆಲೂಗಡ್ಡೆ- 2
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – ½ ಟೀಸ್ಪೂನ್
ಗಾರ್ಲಿಕ್ ಪೇಸ್ಟ್ – ½ ಟೀಸ್ಪೂನ್
ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಮೈದಾ – 2 ಟೇಬಲ್ ಸ್ಪೂನ್
ಬ್ರೆಡ್ ಕ್ರಂಬ್ಸ್ – ½ ಕಪ್
ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಹುರಿಯಲು
ಲಾಲಿಪಾಪ್ ಸ್ಟಿಕ್‌ಗಳು – ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ

ಮೊದಲು ಚೀಸ್‌ನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ಬೇಯಿಸಿದ ಆಲೂಗಡ್ಡೆ, ಉಪ್ಪು, ಮೆಣಸಿನ ಪುಡಿ, ಗಾರ್ಲಿಕ್ ಪೇಸ್ಟ್ ಹಾಗೂ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಕಲಸಿ. ಮೃದುವಾದ ಮಿಶ್ರಣ ರೆಡಿ ಆದ ಮೇಲೆ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಪ್ರತಿಯೊಂದರ ಮಧ್ಯೆ ಲಾಲಿಪಾಪ್ ಸ್ಟಿಕ್ ಹಾಕಿ.

ಇನ್ನೊಂದು ಬೌಲ್‌ನಲ್ಲಿ ಮೈದಾ ಮತ್ತು ಸ್ವಲ್ಪ ನೀರು ಸೇರಿಸಿ ಸ್ವಲ್ಪ ಗಟ್ಟಿಯಾದ ಮಿಶ್ರಣ ತಯಾರಿಸಿ. ಚೀಸ್ ಉಂಡೆಗಳನ್ನು ಮೊದಲು ಈ ಮಿಶ್ರಣದಲ್ಲಿ ಮುಳುಗಿಸಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಉರುಳಿಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಚೀಸ್ ಲಾಲಿಪಾಪ್‌ಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
ಹುರಿದ ಲಾಲಿಪಾಪ್‌ಗಳನ್ನು ಕಿಚನ್ ಟಿಷ್ಯೂ ಮೇಲೆ ಇಟ್ಟು ಹೆಚ್ಚುವರಿ ಎಣ್ಣೆ ತೆಗೆದು, ಟೊಮ್ಯಾಟೋ ಸಾಸ್ ಅಥವಾ ಮೇಯೋನಿಸ್ ಜೊತೆಗೆ ಬಿಸಿ ಬಿಸಿಯಾಗಿ ಸವಿಯಿರಿ.

error: Content is protected !!