March 28, 2026
Saturday, March 28, 2026
spot_img

ಏನ್ರಪ್ಪ ಎಲ್ಲರೂ ‘ಗ್ಯಾರಂಟಿ’ ಸರ್ಕಾರದ ಬಜೆಟ್ ಲೆಕ್ಕಾಚಾರ ನೋಡೋಕೆ, ಕೇಳೋಕೆ ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದ ದೀರ್ಘಕಾಲಿಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯ ಅವರು ನಾಳೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಹಣಕಾಸು ಸಚಿವರೂ ಆಗಿರುವ ಅವರು, ಶುಕ್ರವಾರ ಬೆಳಿಗ್ಗೆ 10:15ಕ್ಕೆ ತಮ್ಮ ಜೀವನದ ದಾಖಲೆಯ 17ನೇ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಈ ಬಾರಿಯ ಬಜೆಟ್ ಅಂದಾಜು 4.5 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆಯಿದೆ. ಕಳೆದ ವರ್ಷ ನಿಗದಿತ ಆದಾಯ ಸಂಗ್ರಹದ ಗುರಿ ಮುಟ್ಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅದರ ನೇರ ಪರಿಣಾಮ 2026-27ನೇ ಸಾಲಿನ ಈ ಬಜೆಟ್ ಮೇಲೆ ಬೀರುವುದು ಖಚಿತವಾಗಿದೆ.

ರಾಜ್ಯದ ಆರ್ಥಿಕತೆಯಲ್ಲಿ ಸಾಲ ಮಾಡಿ ಅಭಿವೃದ್ಧಿ ಮಾಡುವುದು ಅನಿವಾರ್ಯ ಎಂಬಂತಾಗಿದ್ದು, ಈ ಬಾರಿ ಬರೋಬ್ಬರಿ 75 ಸಾವಿರ ಕೋಟಿ ರೂ. ಸಾಲ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ರಾಜ್ಯದ ಒಟ್ಟು ಸಾಲದ ಮೊತ್ತ 8.30 ಲಕ್ಷ ಕೋಟಿ ರೂ.ಗಳ ಗಡಿ ದಾಟುವ ಆತಂಕ ಎದುರಾಗಿದೆ.

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಬಗ್ಗೆ ಸ್ವತಃ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹಲವು ಬಾರಿ ಚರ್ಚಿಸಿದ್ದಾರೆ. ಆದರೂ, ಬಜೆಟ್‌ನಲ್ಲಿ ಗ್ಯಾರಂಟಿಗಳನ್ನು ತಕ್ಷಣಕ್ಕೆ ಕಡಿತಗೊಳಿಸುವ ಬದಲಿಗೆ, ಹಂತ ಹಂತವಾಗಿ ಪರಿಷ್ಕರಿಸುವ ರಣತಂತ್ರವನ್ನು ಸಿದ್ದರಾಮಯ್ಯ ಅನುಸರಿಸಲಿದ್ದಾರೆ ಎನ್ನಲಾಗಿದೆ.

ವಿಶೇಷವಾಗಿ ಮಹಿಳೆಯರಿಗೆ ಹೊಸ ರಿಯಾಯಿತಿ ಯೋಜನೆಗಳನ್ನು ಘೋಷಿಸುವ ಮೂಲಕ ಗ್ಯಾರಂಟಿಗಳ ಜನಪ್ರಿಯತೆ ಉಳಿಸಿಕೊಳ್ಳುವ ಜೊತೆಗೆ, ಮೂಲಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವ ‘ಬ್ಯಾಲೆನ್ಸಿಂಗ್ ಬಜೆಟ್’ ಮಂಡಿಸುವುದು ಮುಖ್ಯಮಂತ್ರಿಗಳ ಮುಂದಿರುವ ದೊಡ್ಡ ಸವಾಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !