ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಬಿಜೆಪಿ ಸರ್ಕಾರ ಅಡಳಿತದಲ್ಲಿದೆ. ಈ ಮೂಲಕ ಈ ಪ್ರದೇಶದ ಜನರು ಬಿಜೆಪಿ ಹಾಗೂ ನಮ್ಮೆಲ್ಲರನ್ನು ಎಷ್ಟು ಆಶೀರ್ವದಿಸಿದೆ ಎಂಬುದನ್ನು ತೋರಿಸುತ್ತದೆ. ಆದರೆ ಕೆಲವು ಜನರಿಗೆ ಈ ಆಶೀರ್ವಾದವನ್ನು ಸಹಿಸೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರೋಪ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ಭಾನುವಾರ ಹರಿಯಾಣದಲ್ಲಿ ಸುಮಾರು 11,000 ಕೋಟಿ ರೂ. ಮೌಲ್ಯದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ ವಿಭಾಗದ ನಗರ ವಿಸ್ತರಣಾ ರಸ್ತೆ-2 ಯೋಜನೆಗಳನ್ನು ಉದ್ಘಾಟಿಸಿದರು.
ಜನರು ನೀಡಿದ ಆಶೀರ್ವಾದದಿಂದ ಬಿಜೆಪಿ ಜನರಿಗೆ ಅಗತ್ಯವಿರುವ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಲೇ ಬಂದಿದೆ, ಈಗಲೂ ಮಾಡುತ್ತಿದೆ. ನಾವು ನಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವ ಮೂಲಕ ದೆಹಲಿ-ಎನ್‌ಸಿಆರ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ಇದೆಲ್ಲದರ ನಡುವೆ ಸಾರ್ವಜನಿಕರ ಈ ಆಶೀರ್ವಾದವನ್ನು ಇನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕೆಲವು ರಾಜಕೀಯ ಪಕ್ಷಗಳಿವೆ. ಅವರು ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.
ಈ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿನ ಜನರ ಪ್ರಯಾಣಕ್ಕೆ ಸಹಾಯಕವಾಗುತ್ತದೆ. ಬಹಳ ದಿನಗಳ ನಂತರ ದೆಹಲಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಆಡಳಿತಕ್ಕೆ ಬಂದಿದೆ. ಆದರೆ ಈ ಹಿಂದಿನ ಸರ್ಕಾರಗಳು ದೆಹಲಿಯನ್ನು ಕಂದಕಕ್ಕೆ ತಳ್ಳಿದ್ದವು. ಬಿಜೆಪಿ ಸರ್ಕಾರ ದೆಹಲಿಯನ್ನು ಪ್ರಗತಿಪಥದತ್ತ ಕೊಂಡೊಯ್ಯಲಿದೆ ಎಂದು ಹೇಳಿದರು.