ವೃದ್ಧಾಶ್ರಮಕ್ಕೆ ಸೇರಿಸಿದ ಪುತ್ರ: ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬೆಂಗಳೂರಿನ ಜೆಪಿ ನಗರ 8ನೇ ಹಂತದಲ್ಲಿರುವ ಖಾಸಗಿ ವೃದ್ದಾಶ್ರಮದಲ್ಲಿ ವಾಸವಿದ್ದ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಮೃತರಾಗಿರುವವರು ಕೃಷ್ಣಮೂರ್ತಿ (81) ಮತ್ತು ಅವರ ಪತ್ನಿ ರಾಧಾ (74) ಎಂದು ಗುರುತಿಸಲಾಗಿದೆ. ಇಬ್ಬರೂ ಕೆಲವೇ ವಾರಗಳ ಹಿಂದೆ ಆಶ್ರಮಕ್ಕೆ ಸೇರಿಸಲ್ಪಟ್ಟಿದ್ದರು. ಕುಟುಂಬದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದರಿಂದ ಮನನೊಂದು ದಂಪತಿಯ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಪೊಲೀಸ್ ಮೂಲಗಳಿಂದ ಲಭ್ಯವಿರುವ ಮಾಹಿತಿ ಪ್ರಕಾರ, ಮನೆಯಲ್ಲಿ ಸೊಸೆ ಮಾಡುವ ಅಡುಗೆ ಚೆನ್ನಾಗಿಲ್ಲವೆಂದು ಹೇಳಿದರೂ ಅದನ್ನು ಸೊಸೆ ತಾತ್ಸಾರ ಮಾಡಿ ಜಗಳ ಮಾಡುತ್ತಿದ್ದಳು. ಇದನ್ನು ಮಗನಿಗೆ ಹೇಳಿದರೆ ಮಗನೂ ಕೂಡ ಜಗಳ ಮಾಡಿ ತಂದೆ-ತಾಯಿಗೆ ಬೈಯುತ್ತಿದ್ದನು. ಈ ಹಿನ್ನೆಲೆಯಲ್ಲಿ ಕಳೆದ ವಾರ ವೃದ್ಧ ದಂಪತಿಯನ್ನು ಅವರ ಮಗನೇ ಬಂದು ಖಾಸಗಿ ವೃದ್ದಾಶ್ರಮಕ್ಕೆ ಸೇರಿಸಿ ಹೋಗಿದ್ದನು. ಆದರೆ, ಮಂಗಳವಾರ ರಾತ್ರಿ ದಂಪತಿ ಅವರ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬುಧವಾರ ಬೆಳಗ್ಗೆ ಕೋಣೆಯ ಬಾಗಿಲು ತೆರೆಯದ ಕಾರಣ ಶಂಕೆಗೊಂಡ ಆಶ್ರಮ ಸಿಬ್ಬಂದಿ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸರ ನೆರವಿನಿಂದ ಬಾಗಿಲು ತೆರೆಯಲಾಗಿದ್ದು, ದಂಪತಿಯ ಶವ ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!