ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಳಿಯನ ಸಾವಿನ ಬಳಿಕ ಶಿವಮೊಗ್ಗದಲ್ಲಿ ಮಾಜಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿ, 2008ರಲ್ಲಿ ನನ್ನ ಪುತ್ರಿ ಸೌಮ್ಯ ಜೊತೆ ಪ್ರತಾಪ್ ಕುಮಾರ್ ವಿವಾಹವಾಗಿತ್ತು ನನ್ನ ವ್ಯವಹಾರ ,ರಾಜಕೀಯ ಸೇರಿದಂತೆ ಎಲ್ಲವನ್ನು ಪ್ರತಾಪ್ ಮನೆ ಮಗನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ. ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತು ಎಂದು ಹೇಳಿದ್ದಾರೆ.
ನಮ್ಮ ಜೊತೆಯಲ್ಲೇ ಇದ್ದ ಪ್ರತಾಪ್ ನಮ್ಮ ಎಲ್ಲಾ ವ್ಯವಹಾರಗಳನ್ನು ಪ್ರತಾಪ್ ನೋಡಿಕೊಳ್ಳುತ್ತಿದ್ದರು. ಇಂದು ಬೆಳಿಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದರು.
ಮಧ್ಯಾಹ್ನ 1:45ರ ವೇಳೆಗೆ ಪ್ರತಾಪ್ ಸಹೋದರ ಪ್ರಭುದೇವ ಕರೆಮಾಡಿ, ಪ್ರತಾಪ್ ಏನಾದ್ರೂ ನಿಮಗೆ ಸಿಕ್ಕಿದ್ನಾ ಅಂತಾ ಕೇಳಿದ್ರು. ನನ್ನ ಬಳಿ ಊರಿಗೆ ಹೋಗ್ತೀನಿ ಅಂತ ಹೇಳಿ ಹೋಗಿದ್ದಾನೆ ಅಂದೆ. ಅದೇನೋ ಮಾತ್ರೆ ತಗೊಂಡಿದ್ದಾನೆ ಅಂತ ಸುದ್ದಿಯಿದೆ. ಅವನ ಫೋನ್ ಸ್ವಿಚ್ ಆಫ್ ಆಗಿದೆ. ಕೂಡಲೇ ಮೊಬೈಲ್ ಟ್ರ್ಯಾಕ್ ಮಾಡಿ ಎಂದು ಸಹೋದರ ಹೇಳಿದ.
ಪ್ರಭುದೇವ ಅವರ ಕರೆ ಬಂದ ಕೂಡಲೇ ಡಿಎಸ್ಪಿ, ಶಿವಮೊಗ್ಗ ಎಸ್ಪಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ. ನಂತರ ನಾನು ಪ್ರತಾಪ್ಗೆ ಕರೆ ಮಾಡಿದೆ. ಪ್ರತಾಪ್ ಫೋನ್ ರಿಸೀವ್ ಮಾಡಿ ಮಾತನಾಡಿದ. ಎಲ್ಲಿದಿಯಾ ಅಂತಾ ಕೇಳಿದಾಗ, ಹೊನ್ನಳ್ಳಿ-ಮಲೆಬೆನ್ನೂರು ಮಾರ್ಗದಲ್ಲಿದಿನಿ ಅಂತಾ ಹೇಳಿದರು. ಸ್ಪಷ್ಟವಾಗಿ ಮಾತನಾಡಿತ್ತಿರಲಿಲ್ಲ. ಕರೆ ಸ್ವೀಕರಿಸಿದ ವಿಚಾರವನ್ನು ನಾನು ಪೊಲೀಸ್ ಸೇರಿದಂತೆ ಎಲ್ಲರಿಗೂ ತಿಳಿಸಿದೆ. ಈ ವೇಳೆ ಪ್ರಭು ಅವರು ದಾರಿಯಲ್ಲಿ ಬರುತ್ತಿದ್ದಾಗ ಪ್ರತಾಪ್ ಅವರ ಕಾರು ಸಿಕ್ಕಿತು. ಕೂಡಲೇ ಅವರು ಹೊನ್ನಾಳಿಗೆ ಪ್ರತಾಪ್ ಅವರನ್ನು ಕರೆ ತಂದರು. ಈ ವೇಳೆ ನೀವು ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸಲಹೆ ನೀಡಿದರು. ದಾವಣಗೆರೆಗೆ ದೂರ ಆಗುತ್ತದೆ ಎಂದು ತಿಳಿದು ಶಿವಮೊಗ್ಗಕ್ಕೆ ದಾಖಲಿಸಲು ಪ್ರಭು ಮುಂದಾದರು. ಶಿಕಾರಿಪುರದ ಹತ್ತಿರ ಬರುವಾಗ ದಾರಿ ಮಧ್ಯೆ ಪ್ರತಾಪ್ ಮೃತಪಟ್ಟರು.
ಪ್ರತಾಪ್ ಅವರಿಗೆ ಮಕ್ಕಳಾಗಿಲ್ಲ ಎಂಬ ಕೊರಗಿತ್ತು. ಕುಡಿತದ ಚಟವು ಇತ್ತು. ಲಿವರ್ ಹೋಗಿತ್ತು. ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿ 2 ತಿಂಗಳು ಚಿಕಿತ್ಸೆ ಕೊಡಿಸಿದ್ದೆ. ಎಲ್ಲಾ ಸರಿ ಹೋಗಿತ್ತು. ಆದರೆ ಮತ್ತೆ ಕುಡಿತ ಮಾಡುವುದನ್ನು ಅಭ್ಯಾಸ ಮಾಡಿದ್ದರು. ನಾನು ಈ ರೀತಿ ಕುಡಿಯಬಾರದು ಎಂದು ಹೇಳಿದ್ದೆ. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರು ನೋಡಿಕೊಳ್ಳುತ್ತಿದ್ದರು ಎಂದು ಬಿಸಿ ಪಾಟೀಲ್ ಹೇಳಿದರು.