ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ನೋಯ್ಡಾ ಪಶ್ಚಿಮದಲ್ಲಿರುವ ಏಸ್ ಸಿಟಿ ಸೊಸೈಟಿಯಲ್ಲಿ 13 ನೇ ಮಹಡಿಯಿಂದ ಹಾರಿ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆ ಸಾಕ್ಷಿ ಚಾವ್ಲಾ ತನ್ನ 11 ವರ್ಷ ಮಗನೊಂದಿಗೆ (ಮಗ ದಕ್ಷ) 13ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸೋದಕ್ಕೂ ಮುನ್ನವೇ ಮನೆಯನ್ನ ಶೋಧಿಸಿದ್ದಾರೆ. ಈವೇಳೆ ಮೃತ ಮಹಿಳೆ ಸಾಕ್ಷಿ ಪತಿಗೆ ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದೆ. ಇದರಲ್ಲಿ ʻನಾವು ಈ ಲೋಕವನ್ನು ತೊರೆಯುತ್ತಿದ್ದೇವೆ.. ಕ್ಷಮಿಸಿ… ನಾವು ಇನ್ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಕಾರಣವಲ್ಲʼ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಇದು ಆತ್ಮಹತ್ಯೆಯೇ. ಸಾಕ್ಷಿ ಅವರ ಮಗ ದಕ್ಷ ಮಾನಸಿಕ ಅಸ್ವಸ್ಥನಾಗಿದ್ದು, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದರಿಂದಾಗಿ ಶಾಲೆಗೂ ಹೋಗುತ್ತಿರಲಿಲ್ಲ. ವಿಪರೀತ ಔಷಧ ಸೇವಿಸಬೇಕಿತ್ತು. ಇದರಿಂದ ಸಾಕ್ಷಿ ಬಹಳ ನೊಂದಿದ್ದಳು. ತನ್ನ ಕಷ್ಟವನ್ನು ನೆರೆಯವರೊಂದಿಗೆ ಹೇಳಿಕೊಳ್ಳುತ್ತಿದ್ದಳು ಎಂದು ತಿಳಿಸಿದ್ದಾರೆ.