ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯ ಸೇವನೆಗೆ ಹಣ ಕೊಡಲು ನಿರಾಕರಿಸಿದ ತಾಯಿಯ ಮೇಲೆ ಮಗನೇ ಕಬ್ಬಿಣದ ರಾಡ್’ನಿಂದ ಹಲ್ಲೆ ನಡೆಸಿ, ಹತ್ಯೆಗೈದಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಶಾಂತಾಬಾಯಿ (81) ಹತ್ಯೆಯಾದ ವೃದ್ಧೆಯಾಗಿದ್ದು, ಆರೋಪಿಯನ್ನು ಮಹೇಂದ್ರ ಸಿಂಗ್ (56) ಎಂದು ಗುರ್ತಿಸಲಾಗಿದೆ. ಕುಡಿತದ ಚಟಕ್ಕೆ ಬಿದ್ದಿದ್ದ ಮಹೇಂದ್ರ ಸಿಂಗ್, ಕೆಲಸಕ್ಕೆ ಹೋಗದೇ ಅಲೆಯುತ್ತಿದ್ದ. ನಿತ್ಯ ಹಣಕ್ಕಾಗಿ ತಾಯಿಗೆ ಹಿಂಸೆ ಕೊಟ್ಟು, ನಿಂದಿಸುತ್ತಿದ್ದ ಎಂದು ತಿಳಿದುಬಂದಿದೆ.
ಗುರುವಾರ ಹಣ ಕೊಡದೇ ಇದಿದ್ದಕ್ಕೆ ತಾಯಿಯೊಂದಿಗೆ ಜಗಳ ಮಾಡಿದ್ದು, ಈ ವೇಳೆ ಕಬ್ಬಿಣದ ರಾಡ್ ನಿಂದ ತಾಯಿಯ ತಲೆಗೆ ಹೊಡೆದು ಹತ್ಯೆ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಬಳಿಕ ಸ್ಥಳೀಯರು ಮೃತ ಮಹಿಳೆಯ ಮಗಳಿಗೆ ಮಾಹಿತಿ ನೀಡಿದ್ದಾರೆ. ಮಗಳು ಸ್ಥಳಕ್ಕೆ ಬಂದಾಗ ತಾಯಿ ಮೃತಪಟ್ಟಿರುವುದು ತಿಳಿದುಬಂದಿದೆ. ಮೃತ ಶಾಂತಬಾಯಿಯ ದಿವಂಗತ ಪತಿ ಸರ್ಕಾರಿ ನೌಕರರಾಗಿದ್ದರು. ಹೀಗಾಗಿ ಪ್ರತಿ ತಿಂಗಳು ಪಿಂಚಣಿ ಹಣ ಬರುತ್ತಿದ್ದರು. ಈ ಹಣದಿಂದ ಜೀವನ ಸಾಗಿಸುತ್ತಿದ್ದರು. ಈ ಹಣವನ್ನೇ ತನ್ನ ಮದ್ಯದ ಚಟಕ್ಕೆ ನೀಡುವಂತೆ ಪುತ್ರ ಪೀಡಿಸುತ್ತಿದ್ದ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.