ಹೊಸದಿಗಂತ ವರದಿ, ಮದ್ದೂರು :
ತಾಲೂಕಿನ ಕುದರಗುಂಡಿ ಕಾಲೋನಿಯ ಮಲ್ಲಯ್ಯನಗರದಲ್ಲಿ ಸೋಮವಾರ ಸಂಜೆ ತಾಯಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧವನ್ನು ವಿರೋಧಿಸಿದ ಪುತ್ರನ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಾಗಿ ಮದ್ದೂರು ಪೊಲೀಸರು ಶೋಧ ಕೈಗೊಂಡಿದ್ದಾರೆ.
ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಸೋಗಾಲ ಗ್ರಾಮದ ಮಹೇಶ್ ಎಂಬುವನು ಶಿವಾನಂದ್ ಎಂಬಾತನನ್ನು ಕೊಲೆ ಮಾಡಿದ ಆರೋಪಿ ಎಂದು ಗೊತ್ತಾಗಿದ್ದು, ಈತನ ಪತ್ತೆಗೆ ಪೊಲೀಸರು ಬಲೇ ಬೀಸಿದ್ದಾರೆ.
ಕೊಲೆಯಾದ ಶಿವಾನಂದನ ತಾಯಿ ಪದ್ಮ ಎಂಬುವರು ಆರೋಪಿ ಮಹೇಶ್‌ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಇಬ್ಬರ ಅಕ್ರಮ ಸಂಬಂಧಕ್ಕೆ ಮಗ ಶಿವಾನಂದ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಹೇಶ ಶಿವಾನಂದನ ಕೊಲೆಗೆ ಸಂಚು ರೂಪಿಸಿದ್ದ.
ಕುದರಗುಂಡಿ ಕಾಲೋನಿಯ ತಾಯಿ ಮನೆಯಲ್ಲಿ ಮಲಗಿದ್ದ ಶಿವಾನಂದನ ಕುತ್ತಿಗೆಗೆ ಟವಲ್‌ನಿಂದ ಬಿಗಿದು ನಂತರ ಈತನ ಕತ್ತಿನ ಬಳಿ ಹರಿತವಾದ ಚಾಕುವಿನಿಂದ ಇರಿದು, ವೃಷಣ ಮತ್ತು ತಲೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್, ಪದ್ಮ ಮತ್ತು ಆತನ ಕುಟುಂಬದವರನ್ನು ವಿಚಾರಣೆಗೊಳಪಡಿಸಿದ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ.