ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಣಾ ದಗ್ಗುಬಾಟಿ ಇತ್ತೀಚೆಗೆ ದುಲ್ಕರ್ ಸಲ್ಮಾನ್ ಅಭಿನಯದ ಕಿಂಗ್ ಆಫ್ ಕೋಥಾ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡುತ್ತಾ ಹಿಂದೆ ನಡೆದ ಘಟನೆಯ ಬಗ್ಗೆ ನೆನೆಪಿಸಿಕೊಂಡರು. ಸುಮ್ಮನೆ ಆಡಿದ ಮಾತು ಅಪಾರ್ಥವಾಗಿ ಇಬ್ಬರ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದ ವಿಚಾರದ ಬಗ್ಗೆ ಜನರ ಮುಂದಿಟ್ಟಿದ್ದಾರೆ. ದುಲ್ಕರ್, ಬಾಲಿವುಡ್ ನ ಜನಪ್ರಿಯ ನಾಯಕಿಯ ಜೊತೆ ಹಿಂದಿ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಶೂಟಿಂಗ್ ಮಧ್ಯೆ ದುಲ್ಕರ್ ಗೆ ನಾಯಕಿ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ ಎಂದು ರಾಣಾ ಹೇಳಿದ್ದಲ್ಲದೆ, ಫೋನ್ ನಲ್ಲಿ ಮಾತನಾಡಲು ಶೂಟಿಂಗ್ ನಿಲ್ಲಿಸಿದ್ದರು ಎಂದು ಕಿಡಿ ಕಾರಿದ್ದರು.
ಈ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ನಾಯಕಿ ಯಾರು ಎಂಬ ಚರ್ಚೆ ಶುರುವಾಗಿದೆ. ಕೆಲವರು ಆಕೆ ಬೇರೆ ಯಾರೂ ಅಲ್ಲ ‘ಸೋನಂ ಕಪೂರ್’ ಎಂದು ನೆಟ್ಟಿಗರು ಟ್ರೋಲ್ ಮಾಡಲು ಪ್ರಾರಂಭಿಸಿದರು. ಈ ಬಗ್ಗೆ ರಾಣಾ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸೋನಂ ಬಗ್ಗೆ ಬಂದ ಟ್ರೋಲ್‌ಗಳ ಬಗ್ಗೆ ವಿರೋಧ ವ್ಯಕ್ತಮಾಡಿದ ರಾಣಾ, ಇದು ನನಗೆ ತುಂಬಾ ಮುಜುಗರ ತಂದಿದೆ. ಆಕೆ ನನ್ನ ಸ್ನೇಹಿತೆ. ನಾನು ಆ ಕಾಮೆಂಟ್‌ಗಳನ್ನು ತಮಾಷೆಗಾಗಿ ಮಾಡಿದ್ದೇನೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಪ್ರಚಾರ ಮಾಡಿದ್ದಕ್ಕಾಗಿ ನನಗೆ ತುಂಬಾ ವಿಷಾದವಿದೆ. ನಾನು ಗೌರವಿಸುವ ಸೋನಂ ಕಪೂರ್ ಮತ್ತು ದುಲ್ಕರ್ ಸಲ್ಮಾನ್ ಅವರಿಗೆ ನಾನು ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ. ಈ ಊಹಾಪೋಹ ಸುದ್ದಿಗಳಿಗೆ ನಾನು ಕೊನೆ ಹಾಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ವಿವಾದ ಮುಗಿದು ಹೋಯಿತು ಎಂದು ಎಲ್ಲರೂ ಖುಷಿಪಟ್ಟರು. ಆದರೆ, ರಾಣಾ ಕ್ಷಮೆಯಾಚಿಸಿದರೂ ಸೋನಂ ಕಪೂರ್ ಕೋಪ ತಗ್ಗಿದಂತಿಲ್ಲ. ಅವರು ಇತ್ತೀಚೆಗೆ ತಮ್ಮ Instagram ಕಥೆಗಳಲ್ಲಿ ಅಮೇರಿಕದ ಎಲೀನರ್ ರೂಸ್ವೆಲ್ಟ್ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ʻಸಂಕುಚಿತ ಮನಸ್ಸಿನ ಜನರು ಇತರರ ಬಗ್ಗೆ ಮಾತನಾಡುತ್ತಾರೆ. ಸಾಮಾನ್ಯ ಜನರು ಘಟನೆಗಳ ಬಗ್ಗೆ ಮಾತನಾಡುತ್ತಾರೆ. ಬುದ್ಧಿಜೀವಿಗಳು ಮಾತ್ರ ಹೊಸ ವಿಚಾರಗಳನ್ನು ಚರ್ಚಿಸುತ್ತಾರೆ’ ಎಂದರು. ಈ ಉಲ್ಲೇಖಗಳು ರಾಣಾ ಅವರನ್ನು ಉದ್ದೇಶಿಸಿ ಬರೆದದ್ದು ಎಂದು ನೆಟ್ಟಿಗರು ಹೇಳುತ್ತಾರೆ.