ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು ಎಂಬ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
‘Sorry…ಇದು ನಾನು ಹೇಳಿದ್ದಲ್ಲ. ನನ್ನ ತಂದೆಯಾಗಲಿ, ನನ್ನ ಪತ್ನಿಯಾಗಲಿ ಹೇಳಿದ್ದಲ್ಲ’ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಅವರು ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ದಿನೇಶ್ ಗುಂಡೂರಾವ್, ‘ಬ್ರಾಹ್ಮಣ ಸಮಾಜದ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು. ಮಾಂಸಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಷ್ಟ್ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲ. ಇದು ಯುರೋಪ್‌ನಿಂದ ಬಂದಿರುವಂತದ್ದು. ಸಾವರ್ಕರ್ ಯೂರೋಪ್‌ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಆದರೆ ಗಾಂಧೀಜಿಯವರು ಸಸ್ಯಹಾರಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತು ಎಂದಿದ್ದರು.
ಅವರ ಈ ಹೇಳಿಕೆಗೆ ಬಿಜೆಪಿ ನಾಯಕರು ಸೇರಿದಂತೆ ಸ್ವತಃ ಸಾವರ್ಕರ್ ಕುಟುಂಬದಿಂದ ಕೂಡ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ದಿನೇಶ್ ಗುಂಡುರಾವ್, ‘ಸಾವರ್ಕರ್ ಒಬ್ಬ ನಾಸ್ತಿಕ, ಮಾಂಸಾಹಾರಿ’ “Sorry”…ಇದು ನಾನು ಹೇಳಿದ್ದಲ್ಲ. ನನ್ನ ತಂದೆಯಾಗಲಿ, ನನ್ನ ಪತ್ನಿಯಾಗಲಿ ಹೇಳಿದ್ದಲ್ಲ. ಇದನ್ನು ಹೇಳಿದ್ದು ಸ್ವತಃ ಸಾವರ್ಕರ್ ಅವರೇ!’ ಎಂದು ಟ್ವೀಟ್ ಮಾಡಿದ್ದಾರೆ.