ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಪಶ್ಚಿಮ ಬಂಗಾಳದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ (ಬಿಜಿಬಿಎಸ್) ವೇದಿಕೆಯಲ್ಲಿ ಈ ಘೋಷಣೆ ಮಾಡಿದರು.
ಘೋಷಣೆ ಮಾಡಿದ ಬೆನ್ನಲ್ಲೇ ಗಂಗೂಲಿ ಅವರಿಗೆ ನೇಮಕಾತಿ ಪತ್ರವನ್ನು ತಕ್ಷಣವೇ ಹಸ್ತಾಂತರಿಸಿದರು.
2011ರಲ್ಲಿ ಅಧಿಕಾರಕ್ಕೆ ಬಂದ ನಂತರ, ಬ್ಯಾನರ್ಜಿ ಅವರು ನಟ ಶಾರುಖ್ ಖಾನ್ ಅವರನ್ನು ಪಶ್ಚಿಮ ಬಂಗಾಳದ ರಾಯಭಾರಿಯಾಗಿ ಆಯ್ಕೆ ಮಾಡಿದ್ದರು. ಶಾರುಖ್ ಖಾನ್ ನಟರಾಗಿ ಪರಿಚಿತರಲ್ಲದೇ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ- ಮಾಲೀಕರಾಗಿದ್ದರು.
‘ಸೌರವ್ ಜನಪ್ರಿಯ ವ್ಯಕ್ತಿತ್ವ. ಅವರು ಹೊಸ ಪೀಳಿಗೆಗೆ ಒಳ್ಳೆಯ ಕೆಲಸ ಮಾಡುತ್ತಾರೆ. ಬಂಗಾಳದ ಬ್ರಾಂಡ್ ಅಂಬಾಸಿಡರ್ ಹುದ್ದೆಗೆ ಅವರ ಹೆಸರನ್ನು ಘೋಷಿಸುತ್ತಿದ್ದೇನೆ” ಎಂದು ಮಮತಾ ಹೇಳಿದ್ದಾರೆ.
ಟಿಎಂಸಿ ಆಡಳಿತಕ್ಕೆ ಬರುವ ಮೊದಲು ರಾಜ್ಯವು ಯಾವುದೇ ಬ್ರಾಂಡ್ ಅಂಬಾಸಿಡರ್ ಅನ್ನು ಹೊಂದಿರಲಿಲ್ಲ. ಈ ಮೊದಲು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ನಟ ದೇವ್ ಅವರನ್ನು ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ರಾಯಭಾರಿಯಾಗಿ ಮಮತಾ ಘೋಷಿಸಿದ್ದರು.