ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಗಿಗುಡ್ಡದಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆಯನ್ನು ಬುಧವಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಲೋಕಾರ್ಪಣೆಗೊಳಿಸಿದರು.
ಬಳಿಕ ಖುದ್ದು ಡಿಕೆ ಶಿವಕುಮಾರ್ ಅವರೇ ಫ್ಲೈಓವರ್ ರಸ್ತೆಯಲ್ಲಿ ಕಾರು ಓಡಿಸುವ ಮೂಲಕ ಪ್ರಾಯೋಗಿಕ ವಾಹನ ಸಂಚಾರಕ್ಕೆ ಚಾಲನೆ ನೀಡಿದರು. ಕಾರಿನಲ್ಲಿ ಡಿಕೆಶಿ ಜೊತೆರೆ ಸಚಿವ ರಾಮಲಿಂಗಾ ರೆಡ್ಡಿ ಅವರೂ ಕುಳಿತಿದ್ದರು.
ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಾಣವಾಗಿರುವ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್ಸು, ಕಾರು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ. 2ನೇ ಹಂತದ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ಮೆಟ್ರೋ ಕಂಬಕ್ಕೆ ಎರಡೂ ಬದಿಯಲ್ಲಿ ರೆಕ್ಕೆಗಳ ರೀತಿಯಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ.
ಲಾಭ ಏನು?
ಮೇಲ್ಸೇತುವೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಆಗುತ್ತಿದ್ದ ದಟ್ಟಣೆ ಕಡಿಮೆಯಾಗಲಿದೆ. ಎಲೆಕ್ಟ್ರಾನಿಕ್ಸ್ ಸಿಟಿಯ ಉದ್ಯೋಗಿಗಳು ಟ್ರಾಫಿಕ್ ಜಾಮ್ ನಿಂದ ಮುಕ್ತಿ ಪಡೆಯಲಿದ್ದಾರೆ. 3.3 ಕಿಮೀವರೆಗೆ ತಡೆ ರಹಿತ ಸಂಚಾರವಿರಲಿದೆ. ಹೀಗಾಗಿ ಒಮ್ಮೆ ಫ್ಲೈ ಓವರ್ ಹತ್ತಿದರೆ 3.3 ಕಿಮೀವರೆಗೆ ಎಲ್ಲಿಯೂ ಇಳಿಯಲು ಅವಕಾಶವಿಲ್ಲ. ಎರಡು ಕಡೆ ಯೂ ಟರ್ನ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಮಾರೇನಹಳ್ಳಿ ರಸ್ತೆಯಲ್ಲಿ 31 ಮೀಟರ್ ಎತ್ತರದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸಿದ್ದು, ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗವನ್ನು ಎರಡನೇ ಹಂತದಲ್ಲಿ ಹಾಕಲಾಗಿದೆ. ಎಲಿವೇಟೆಡ್ ರಸ್ತೆಯ ಮೇಲೆ ಮೆಟ್ರೋ ಮಾರ್ಗವನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಇದು ಮೊದಲ ಫ್ಲೈಓವರ್ ಆಗಿದೆ.
ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್‌ವರೆಗೆ ಹಳದಿ ಮಾರ್ಗದ ಮೆಟ್ರೋಗಾಗಿ ರಸ್ತೆ ಮೇಲ್ಸೇತುವೆಯ ಮೊದಲ ಹಂತವನ್ನು ಈಗಾಗಲೇ ನಿರ್ಮಿಸಲಾಗಿದೆ. BMRCL ಪ್ರಕಾರ, A, B ಮತ್ತು C ರ್ಯಾಂಪ್‌ಗಳು ಮೇ 2024ರೊಳಗೆ ಪೂರ್ಣಗೊಂಡು ಕಾರ್ಯಾರಂಭಿಸಬೇಕಿತ್ತು. D ಮತ್ತು E ರ‍್ಯಾಂಪ್‌ಗಳನ್ನು ಡಿಸೆಂಬರ್ 2024ರೊಳಗೆ ಕಾರ್ಯಾರಂಭ ಮಾಡಲಾಗುತ್ತದೆ.