ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ಧ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಅಂತಲೇ ಕರೆಯುತ್ತಾರೆ. ಬುಧವಾರ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ರಥೋತ್ಸವದೊಂದಿಗೆ ಆರಂಭವಾಗಲಿದೆ. ಮುಂದಿನ 15 ದಿನಗಳ ಕಾಲ ಜಾತ್ರೆ ನಡೆಯಲಿದೆ. ಜಾತ್ರೆ ಅಂಗವಾಗಿ ಮೂರು ದಿನಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 15 ರಂದು ಗವಿಮಠದ ಜಾತ್ರೆಯ ಅಂಗವಾಗಿ ಪ್ರತಿವರ್ಷ ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ರಥದಲ್ಲಿ ಸ್ಥಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಇಂದು ಸಂಜೆ 5:30ಕ್ಕೆ ಮಠದ ಮುಂದಿರುವ ಮೈದಾನದಲ್ಲಿ, ಮಹಾ ರಥೋತ್ಸವ ನಡೆಯಲಿದೆ. ಧಾರವಾಡದ ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕ ಪದ್ಮಶ್ರೀ ಪಂಡಿತ ಎಮ್ ವೆಂಕಟೇಶ್ ಕುಮಾರ್ ಉದ್ಘಾಟನೆ ಚಾಲನೆ ನೀಡಲಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇನ್ನು ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಕೂಡಾ ಜಾತ್ರೆಯಲ್ಲಿ ಬಾಗಿಯಾಗಲಿದ್ದಾರೆ. ರಥೋತ್ಸವಕ್ಕೆ ದೇಶದ ಅನೇಕ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ಸಂಜೆ 6 ಗಂಟೆಗೆ ಮಠದ ಕೈಲಾಸ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸರಿಗಮಪ ಖ್ಯಾತಿಯ ಹರ್ಷ, ಧಾರವಾಡದ ಬಸವರಾಜ್ ವಂದಲಿ, ಹುಬ್ಬಳ್ಳಿಯ ಸುಜಯಿಂದ್ರ ಕುಲಕರ್ಣಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮೂರು ದಿನಗಳ ಕಾಲ ಮಠದ ಆವರಣದಲ್ಲಿ ಭಕ್ತಿ ಹಿತಚಿಂತನಾ ಸಮಾವೇಶ, ಧಾರ್ಮಿಕ ಕಾರ್ಯಕ್ರಮಗಳು, ಅನೇಕ ಕ್ರೀಡೆಗಳು, ಪಲಫುಷ್ಟ ಪ್ರದರ್ಶನ, ಕೃಷಿ ವಸ್ತುಗಳ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.