ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕೊರಿಯಾದ ಯುದ್ಧ ವಿಮಾನವೊಂದು ಇಂದು ಗುರುವಾರ ನಸುಕಿನ ಜಾವ ತರಬೇತಿ ವೇಳೆ ಜನವಸತಿ ಪ್ರದೇಶದ ಮೇಲೆ ಆಕಸ್ಮಿಕವಾಗಿ ಎಂಟು ಬಾಂಬ್‌ಗಳನ್ನು ಬೀಳಿಸಿದ್ದರಿಂದ ಏಳು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೆಎಫ್-16 ಫೈಟರ್ ಜೆಟ್ ನಿಂದ ಆಕಸ್ಮಿಕವಾಗಿ ಬಿದ್ದ ಎಂಕೆ-82 ಬಾಂಬ್ ಗಳಿಂದ ಕೆಲ ನಾಗರಿಕರಿಗೆ ಗಾಯಗಳಾಗಿವೆ ಎಂದು ಸಿಯೋಲ್ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಈ ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ತನಿಖೆ ಮಾಡಲು ಮತ್ತು ನಾಗರಿಕ ಹಾನಿಯ ಪ್ರಮಾಣ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ಕೂಡ ವಾಯುಪಡೆ ತಿಳಿಸಿದೆ.
ವಾಯುಪಡೆಯು ಸೇನೆಯೊಂದಿಗೆ ಜಂಟಿ ಲೈವ್-ಫೈರಿಂಗ್ ಕವಾಯತುಗಳಲ್ಲಿ ಭಾಗವಹಿಸಿದ್ದ ವೇಳೆ ಘಟನೆ ನಡೆದಿದೆ. ನಾಗರಿಕರಿಗೆ ಉಂಟಾದ ಹಾನಿ ಬಗ್ಗೆ ವಾಯುಪಡೆ ಕ್ಷಮೆಯಾಚಿಸಿದ್ದು, ಗಾಯಗೊಂಡವರ ಚೇತರಿಕೆಗೆ ಭರವಸೆ ವ್ಯಕ್ತಪಡಿಸಿದೆ. ಅವರ ಚಿಕಿತ್ಸೆಗೆ ನೆರವಾಗುವುದಾಗಿ ಹಾಗೂ ಪರಿಹಾರ ಒದಗಿಸುವುದಾಗಿ ಕೂಡ ಭರವಸೆ ನೀಡಿದೆ.