June 27, 2026
Saturday, June 27, 2026
spot_img

ಜೂನ್ 4ಕ್ಕೆ ನೈಋತ್ಯ ಮುಂಗಾರು ಆರಂಭ: ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಹವಾಮಾನ ಇಲಾಖೆ ಮುಂಗಾರು ಪ್ರವೇಶದ ದಿನಾಂಕದಲ್ಲಿ ಮಹತ್ವದ ಬದಲಾವಣೆಯನ್ನು ಪ್ರಕಟಿಸಿದೆ. ದೇಶದ ಕೃಷಿ ವಲಯದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳು ಜೂನ್ 4ರಂದು ಅಧಿಕೃತವಾಗಿ ಕೇರಳ ಕರಾವಳಿಯನ್ನು ಪ್ರವೇಶಿಸಲಿವೆ. ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಮುಂಗಾರು ಮಾರುತಗಳ ವೇಗ ಹೆಚ್ಚಾಗಿದ್ದು, ಜೂನ್ 4ರ ವೇಳೆಗೆ ಕೇರಳದ ಭೂಭಾಗವನ್ನು ಮುಟ್ಟಲಿವೆ ಎಂದು ಇಲಾಖೆ ಖಚಿತಪಡಿಸಿದೆ. ಇದರ ಪ್ರಭಾವದಿಂದಾಗಿ ಈಗಾಗಲೇ ಕೇರಳದ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ತೀವ್ರಗೊಂಡಿದೆ.

ಹಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ

ಮುಂಗಾರು ಆರಂಭದ ಬೆನ್ನಲ್ಲೇ ಭಾರಿ ಗಾಳಿ-ಮಳೆಯ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಕೇರಳದಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಪ್ರಮುಖವಾಗಿ ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಪತ್ತನಂತಿಟ್ಟ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಮುನ್ನೆಚ್ಚರಿಕೆ ನೀಡಲಾಗಿದೆ.

ಮೀನುಗಾರರಿಗೆ ಕಟ್ಟುನಿಟ್ಟಿನ ಸೂಚನೆ

ಸಮುದ್ರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಅಲೆಗಳ ಅಬ್ಬರ ಜೋರಾಗಿರಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಕರ್ನಾಟಕಕ್ಕೆ ಯಾವಾಗ ಮುಂಗಾರು ಪ್ರವೇಶ?

ಈ ವರ್ಷ ‘ಎಲ್ ನಿನೋ’ ಪ್ರಭಾವ ಇರುವುದರಿಂದ ದೇಶಾದ್ಯಂತ ಒಟ್ಟಾರೆ ಮುಂಗಾರು ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಕೆಲವೇ ದಿನಗಳಲ್ಲಿ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಿಗೂ ಮುಂಗಾರು ಮಾರುತಗಳು ವಿಸ್ತರಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !