ಬಿತ್ತನೆ ಬೀಜ ಸಂರಕ್ಷಣೆ ಆಗದಿದ್ದರೆ ದೇಶಕ್ಕೆ ಅಪಾಯ: ಡಾ. ವಿಜಯಲಕ್ಷ್ಮಿ ಎಚ್ಚರಿಕೆ

ಹೊಸ ದಿಗಂತ ವರದಿ, ಮಂಡ್ಯ :

ದೇಶದಲ್ಲಿ ಬಿತ್ತನೆ ಬೀಜದ ಸಂರಕ್ಷಣೆ ಆಗಬೇಕಿದೆ. ಇಲ್ಲದಿದ್ದರೆ ರೈತ ಬಹುರಾಷ್ಟ್ರೀಯ ಕಂಪನಿಗಳತ್ತ ಕೈಚಾಚುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮಾನಾಪುರ ಎಚ್ಚರಿಕೆ ನೀಡಿದರು.
ಅಖಿಲ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾಡಳಿತ, ಜಾನಪದ ಜನ್ನೆಯರು ಟ್ರಸ್ಟ್ ವತಿಯಿಂದ ನಗರದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ನಡೆದ ಮಹಿಳಾ ಜಾನಪದ ಗೋಷ್ಠಿಯಲ್ಲಿ ಜನಪದ ಬದುಕಿನಲ್ಲಿ ಮಹಿಳೆ ಪೂರಕವೋ, ಪೋಷಕವೋ, ಪ್ರತ್ಯೇಕವೋ ವಿಚಾರ ಮಂಡಿಸಿ ಮಾತನಾಡಿದರು.
ದೇಶದಲ್ಲಿ ಬೀಜ ಕ್ರಾಂತಿ ಆಗದಿದ್ದರೆ ನೈಸರ್ಗಿಕ ಕೃಷಿ ಹಾಳಾಗುವ ಸಾಧ್ಯತೆಗಳಿವೆ. ಬೀಜ ಸಂರಕ್ಷಕಿಯರನ್ನು ಪತ್ತೆಮಾಡಿ ಅವರು ಕಾಪಾಡಿಕೊಂಡು ಬಂದಿರುವ ಬೀಜಗಳನ್ನು ಸಂರಕ್ಷಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಜನಪದವನ್ನು ಕಟ್ಟಿರುವ ಮಹಿಳೆ ಪ್ರತ್ಯೇಕವೂ ಅಲ್ಲ, ಆಕೆ ಪೂರಕ ಮತ್ತು ಪೋಷಕವಾಗಿದ್ದಾಳೆ. ಪುರುಷರು ಬಿಟ್ಟು ಹೋದ ಮನೆಯ ಜವಾಬ್ದಾರಿ, ಆರ್ಥಿಕ ಸ್ಥಿತಿ ಗತಿಗಳನ್ನು ಬಹಳ ಚೆನ್ನಾಗಿ ನಿರ್ವಹಿಸುವಂತಹ ಚಾಕಚಕ್ಯತೆಯನ್ನು ಜನಪದ ಮಹಿಳೆಯರು ಬೆಳೆಸಿಕೊಂಡಿದ್ದರು ಎಂದು ಉದಾಹರಣೆ ಸಹಿತ ವಿವರಿಸಿದರು.

ದ್ರಾವಿಡ ಭಾಷೆಯಲ್ಲಿ ಜಾನಪದ ಕುರಿತು ಡಾ. ರಜಿಯಾ ಬೇಗಂ ಮಾತನಾಡಿ, ಕರ್ನಾಟಕದಲ್ಲಿ ಮಾತ್ರ ಮಹಿಳೆಯರ ವಿಚಾರದಲ್ಲಿ ಹೆಚ್ಚು ಕೆಲಸಗಳಾಗಿವೆ. ಅದರೆ ಜನಪದದಲ್ಲಿ ಹೆಣ್ಣು ಪ್ರತಿರೋಧವನ್ನು ಒಡ್ಡಿದ್ದರೂ ಅದನ್ನು ದಾಖಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆರೆಗೆ ಹಾರ ಎಂಬ ಕಥಾನಕದಲ್ಲಿ ಹಾರವಾಗುವ ಮಹಿಳೆ ತನ್ನ ಕುಟುಂಬದವರು, ಸ್ನೇಹಿತರೊಡನೆ ಹಂಚಿಕೊಳ್ಳುತ್ತಾಳೆ. ಆದರೆ ಎಲ್ಲರೂ ಸಹ ಕುಟುಂಬ ಹೇಳುವಂತೆ ಕೇಳಬೇಕೆಂಬುದನ್ನೇ ಸೂಚಿಸುತ್ತಾರೇಯೋ ಹೊರತು ಆಕೆಯ ಮನಸ್ಥಿತಿ, ಬದುಕುವ ಹಕ್ಕನ್ನು ತಿಳಿಸಲಿಲ್ಲ. ಇಂತಹ ಪ್ರತಿರೋಧದ ನಡುವೆಯೂ ಪುರುಷ ಪ್ರಧಾನ ಸಮಾಜವೇ ಮೆರೆಯಿತು. ಜತೆಗೆ ಸ್ವಾರ್ಥವನ್ನು ದೂರ ಮಾಡಿ, ಕುಟುಂಬದ ಉಳಿವು ಮತ್ತು ಸಮಾಜದ ಉನ್ನತಿಗೆ ಬದುಕನ್ನು ಮೀಸಲಿಟ್ಟಿದ್ದಳು ಎಂದು ಉದಾಹರಣೆ ಸಮೇತ ವಿವರಿಸಿದರು.
ಪ್ರಾಧ್ಯಾಪಕಿ ಡಾ. ಎಂ. ಕೆಂಪಮ್ಮ ಮಾತನಾಡಿ, ಭಾಷೆಯಲ್ಲಿ ಜನಪದ ಸಾಹಿತ್ಯ ಇದೆ. ಆದರೆ ಮಹಿಳೆ ಅಭಿವ್ಯಕ್ತಪಡಿಸಬೇಕಾದದ್ದನ್ನು ಸ್ಪಷ್ಟವಾಗಿ ಜನಪದಲ್ಲಿ ವ್ಯಕ್ತಪಡಿಸಲಾಗಲಿಲ್ಲಘಿ. ಜನಪದ ಅಧ್ಯಯನ ವಿಭಿನ್ನ ನೆಲೆಯಲ್ಲಿ ನಡೆಯುತ್ತಿದೆ. ಆಧುನೀಕತೆಯ ಸ್ತ್ರೀ ಸಾಹಿತ್ಯದಲ್ಲಿ ಕೊಂಚ ಮಟ್ಟಿಗೆ ಮಹಿಳೆಗೆ ಗೌರವ ನೀಡಲಾಗಿದ್ದರೂ, ಜನಪದದಲ್ಲಿ ಅದು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕಿ ಡಾ. ಜಯಲಕ್ಷ್ಮಿ ಸೀತಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಕೆ.ಎಂ. ವಸುಂಧರ ಕದಲೂರು ಆಶಯ ನುಡಿಯನ್ನಾಡಿದರು. ಡಾ. ಎಸ್.ಸಿ. ಮಂಗಳ, ಡಾ. ರಮ್ಯ, ಡಾ. ಅನಸೂಯ, ಡಾ. ಎಸ್.ಬಿ.ಜ್ಯೋತಿ, ಡಾ. ತೇಜಸ್ವಿನಿ, ಡಾ. ಅನಿತ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!