ಗಗನಯಾನ ನಮ್ಮ ಮುಂದಿನ ಗುರಿ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನ್‌ಯಾನ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮುಂದಿರುವ ಮುಖ್ಯ ಗುರಿ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದರು.

ಕೋಲ್ಕತ್ತಾದಲ್ಲಿ ಬುಧವಾರ ರಾಜಭವನದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ನಂಬಿಕೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಂದ್ರಯಾನ 3ರ ಯಶಸ್ಸು ಮತ್ತು ಮುಂದಿನ ಯೋಜನೆ ಕುರಿತು ಮಾತನಾಡಿದರು. ಇಸ್ರೋ ಮುಂದೆ ಭವಿಷ್ಯದಲ್ಲಿ ಹಲವು ಪ್ರಮುಖ ಗುರಿಗಳಿವೆ. ಇದರಲ್ಲಿ ಮೊದಲನೆಯದು ಗಗನಯಾನ ಯೋಜನೆ. ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಸುರಕ್ಷಿತವಾಗಿ ಭೂಮಿಗೆ ಕರೆತರುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ಕಳೆದ ಅಕ್ಟೋಬರ್​ನಲ್ಲಿ ಇಸ್ರೋ ತನ್ನ ಬಹುನಿರೀಕ್ಷಿತ ಗಗನಯಾನ ಮಿಷನ್​ನ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ.

ಇದೇ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳನ್ನು ಸಾಧಿಸುವುದಕ್ಕಾಗಿ ಇಸ್ರೋ ಮುಖ್ಯಸ್ಥ ಸೋಮನಾಥ್ ಅವರಿಗೆ ರಾಜ್ಯಪಾಲರ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಪ್ರಶಸ್ತಿ ನೀಡಿ ಗೌರವಿಸಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋಮನಾಥ್, ಸದ್ಯದಲ್ಲಿಯೇ ಜಿ-20 ಎಂಬ ಉಪಗ್ರಹ ಉಡಾವಣೆ ಮಾಡಲಾಗುವುದು. ಜಿ-20 ಅಧಿವೇಶನದ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಜಿ-20 ಉಪಗ್ರಹಗಳು ಕೇವಲ ಜಿ20 ರಾಷ್ಟ್ರಗಳ ಹಿತಾಸಕ್ತಿಗೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಸೇವೆ ಸಲ್ಲಿಸಲಿವೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಶಾಂತಿ ಮತ್ತು ಜಾಗತಿಕ ವ್ಯವಹಾರಗಳು, ಪರಿಸರ, ಸಂಸ್ಕೃತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮೇಲೆ ಕೊಡುಗೆ ನೀಡುವ ಪ್ರಯತ್ನ ನಡೆದಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!