September 15, 2026
Tuesday, September 15, 2026
spot_img

ಮಂಗಳೂರಿನಲ್ಲಿ ಸೆ.18ಕ್ಕೆ ವಿಶೇಷ ಸಚಿವ ಸಂಪುಟ ಸಭೆ: ವಿಡಿಯೋ ಮೆಸೇಜ್ ಶೇರ್ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನಿಟ್ಟಿನಲ್ಲಿ ಸೆಪ್ಟೆಂಬರ್ 18ರಂದು ಕಡಲನಗರಿ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಸಿಎಂ ಎಕ್ಸ್‌ ತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಟ್ವೀಟ್ ನಲ್ಲಿ ಏನಿದೆ?

ಕರಾವಳಿ ಭಾಗದ ಜನರ ಬಹುಕಾಲದ ಆಶೋತ್ತರಗಳನ್ನು ಈಡೇರಿಸಲು, ಇದೇ ಸೆಪ್ಟೆಂಬರ್ 18ರಂದು ಕಡಲನಗರಿ ಮಂಗಳೂರಿನಲ್ಲಿ ನಮ್ಮ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ಆಯೋಜಿಸಿದ್ದೇವೆ.

ಕರಾವಳಿಯ ಜನರ ಕಷ್ಟ-ಸುಖಗಳನ್ನು ಹತ್ತಿರದಿಂದ ಕಂಡು, ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳುವುದು ನಮ್ಮ ಉದ್ದೇಶ. ಬಂದರು, ಮೂಲಸೌಕರ್ಯ, ಮೀನುಗಾರಿಕೆ ಮತ್ತು ಕೈಗಾರಿಕಾ ರಂಗಗಳಿಗೆ ನವಚೈತನ್ಯ ತುಂಬುವ ಮೂಲಕ ಕರಾವಳಿಯ ಸಮೃದ್ಧಿಗೆ ಹೊಸ ಮುನ್ನುಡಿ ಬರೆಯಲು ‘ಟೀಮ್ ಕರ್ನಾಟಕ’ ಸಜ್ಜಾಗಿದೆ ಎಂದು ಸಿಎಂ ಡಿಕೆಶಿ ಹೇಳಿದ್ದಾರೆ. ‘ಟೀಮ್ ಕರ್ನಾಟಕ’ ಕರಾವಳಿಯ ಸಮೃದ್ಧಿಗೆ ಹೊಸ ಮುನ್ನುಡಿ ಬರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸಂದೇಶದ ಕೊನೆಯಲ್ಲಿ ಸಿಎಂ ಡಿಕೆಶಿ ತುಳು ಭಾಷೆಯಲ್ಲಿ ‘ಮಾತೆರೆಗ್‌ಲ ಸೊಲ್ಮೆಲು’ ಎಂದು ಹೇಳುವ ಮೂಲಕ ಕರಾವಳಿ ಜನತೆಗೆ ವಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯು ಕರಾವಳಿ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆ ಮೂಡಿಸಿದೆ. ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವುದರ ಜೊತೆಗೆ, ಬಂದರು, ಮೀನುಗಾರಿಕೆ, ಮೂಲಸೌಕರ್ಯ ಮತ್ತು ಕೈಗಾರಿಕೆ ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳು ಹೊರಬರುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !