Monday, October 20, 2025

SPECIAL REPORT | ಎಲ್ಲರ ಗಮನಸೆಳೆಯುತ್ತಿದೆ ಈ ಹಾಲು ಉತ್ಪಾದಕರ ಸಂಘ: ಇಲ್ಲಿದ್ದಾರೆ 300ಕ್ಕೂ ಹೆಚ್ಚು ಹಾಲು ಉತ್ಪಾದಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕು ಕೂಟಗಲ್ ಹೋಬಳಿಯ ಎರೇಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘವು ಅತಿ ಹೆಚ್ಚು ಹಾಲು ಉತ್ಪಾದಿಸುವ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಈ ಗ್ರಾಮದಲ್ಲಿ ಸುಮಾರು 3 ಸಾವಿರ ಜನಸಂಖ್ಯೆಯಿದ್ದು, 300ಕ್ಕೂ ಹೆಚ್ಚು ಹಾಲು ಉತ್ಪಾದಕರಿದ್ದಾರೆ. ಒಂದು ದಿನಕ್ಕೆ ಸರಾಸರಿ 6 ಸಾವಿರದ 500 ರಿಂದ 7 ಸಾವಿರ ಲೀಟರ್ ವರೆಗೂ ಹಾಲು ಸಂಗ್ರಹಿಸಲಾಗುತ್ತಿದ್ದು, ಹಾಲು ಉತ್ಪಾದಕರಿಗೆ ತಿಂಗಳು 65 ರಿಂದ 70 ಲಕ್ಷ ರೂಪಾಯಿವರೆಗೂ ಬಟವಾಡೆಯಾಗುತ್ತದೆ.

ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟವು ಎರಡು ಬಾರಿ ಉತ್ತಮ ಸಂಘ ಪ್ರಶಸ್ತಿಗೆ ಭಾಜನವಾಗಿದೆ.
ದೂರದರ್ಶನದೊಂದಿಗೆ ಹಾಲು ಉತ್ಪಾದಕ ಅಪ್ಪಾಜಿಗೌಡ, ದಿನಕ್ಕೆ 30 ರಿಂದ 35 ಲೀಟರ್‌ ಹಾಲು ಡೇರಿಗೆ ಹಾಕುತ್ತಿದ್ದು, ಉತ್ತಮ ದರ ದೊರೆಯುತ್ತಿದೆ. ಇದು ಜೀವನಕ್ಕೂ ಆಧಾರವಾಗಿದೆ ಎಂದು ತಿಳಿಸಿದರು. ಹಾಲು ಉತ್ಪಾದಕರಾದ ಜಯಮ್ಮ, ದಿನಕ್ಕೆ 25 ರಿಂದ 30 ಲೀಟರ್ ಹಾಲು ಡೇರಿಗೆ ಹಾಕುತ್ತೇನೆ, ಕಳೆದ 35 ವರ್ಷಗಳಿಂದ ಈ ವೃತ್ತಿಯಲ್ಲಿ ನಿರತವಾಗಿದ್ದು, ಬಟವಾಡೆ, ಪಶು ಆಹಾರವೂ ಸಮಯಕ್ಕೆ ಸರಿಯಾಗಿ ದೊರೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ ಎಂದರು.

ಸಂಘದ ಅಧ್ಯಕ್ಷ ಶಿವಯ್ಯ, ಸಂಘದಿಂದ ಹಾಲು ಉತ್ಪಾದಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸಿದ್ದು, ಈ ಹೊಸ ಕಟ್ಟಡದಲ್ಲಿ ಆಧುನಿಕ ತಂತ್ರಜ್ಞಾನದ ಡಿಜಿಟಲ್ ಸಾಮಗ್ರಿಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಸುರೇಶ್, ಸಂಘ ಸ್ಥಾಪನೆಯಾಗಿ 37 ವರ್ಷವಾಗಿದ್ದು, ರೈತರು ಹಲವು ಉಪಯೋಗಗಳನ್ನು ಪಡೆದುಕೊಂಡಿದ್ದಾರೆ. ರಾಸುಗಳು ಹಾಗೂ ಹಾಲು ಉತ್ಪಾದಕರಿಗೆ ವಿಮಾ ಸೌಲಭ್ಯವನ್ನು ನೀಡಲಾಗಿದೆ. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಸಂಘದ ನಿರ್ದೇಶಕ ದಿನೇಶ್‌, ಸಂಘದಿಂದ ಹಾಲು ಉತ್ಪಾದಕರಿಗೆ ಹಲವು ಸೌಲಭ್ಯ ಒದಗಿಸಲಾಗಿದೆ. ಅಧ್ಯಕ್ಷರು, ಕಾರ್ಯದರ್ಶಿಯವರ ಉತ್ತಮ ಕಾರ್ಯದಿಂದಾಗಿ ಸಂಘವೂ ಅಭಿವೃದ್ಧಿ ಹೊಂದುತ್ತಿದೆ ಎಂದರು.

error: Content is protected !!