ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿ ಗಣತಿ ವರದಿ ಜಾರಿ ಮಾಡಲು ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆ ಸರ್ಕಾರಕ್ಕಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಈ ವರದಿ ವಿಚಾರದಲ್ಲಿ ಯಾರಿಗೆ ಆತಂಕ ಮತ್ತು ಗೊಂದಲ ಇವೆಯೋ ಅವರು ಅಧಿವೇಶನದಲ್ಲಿ ಚರ್ಚೆ ಮಾಡಬಹುದು. ಮುಖ್ಯವಾಗಿ ಜನ ತಿಳಿಯಬೇಕಾದದ್ದು ಏನೆಂದರೆ ಈ ಜಾತಿ ಗಣತಿಯಿಂದ ರಾಜಕೀಯದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ.
ನಮ್ಮ ರಾಜ್ಯದಲ್ಲಿ ಕೇವಲ 1,000 ಮತಗಳು ಇರುವ ಸಮುದಾಯದವರೂ ಶಾಸಕರಾಗಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 70 ಸಾವಿರಕ್ಕೂ ಹೆಚ್ಚು ಮತ ಇರುವ ಸಮಾಜದ ನಾಯಕರು ಏಕೆ ಆತಂಕ ಪಡಬೇಕು? ಎಂದು ಪ್ರಶ್ನಿಸಿದರು.
ಈ ವರದಿ ಸದನದಲ್ಲಿ ಚರ್ಚೆ ಆಗಬೇಕು. ನಾಲ್ಕು ದಿನ ಅದೇ ವಿಷಯಕ್ಕೆ ಮೀಸಲಿಡಬೇಕು. ವರದಿ ಸರಿ, ತಪ್ಪಿನ ಬಗ್ಗೆ ಹೇಳಲಿ. ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.