ಹೊಸ ದಿಗಂತ ವರದಿ, ಶಿವಮೊಗ್ಗ:
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಬೇಕೆಂಬ ಕನಸು ಹೊತ್ತವರಿಗೆ ಶನಿವಾರ ನನಸು ಮಾಡಿಕೊಳ್ಳುವ ಸಮಯ ಒದಗಿಬಂದಿತು.
ಶಿವಮೊಗ್ಗದಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದ್ದು, 1200 ಕ್ಕೂ ಅಧಿಕ ಜನರು ಶನಿವಾರ ಮಧ್ಯಾಹ್ನ ಪ್ರಯಾಣ ಬೆಳೆಸಿದರು. ಸಂಸದ ಬಿ.ವೈ.ರಾಘವೇಂದ್ರ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದರು.
ಕುಂಭಮೇಳಕ್ಕೆಂದು ಹೊರಟವರನ್ನು ಬೀಳ್ಕೊಡಲು ಕುಟುಂದ ಸದಸ್ಯರಾದಿಯಾಗಿ ಆಗಮಿಸಿದ್ದರು. ಇದರಿಂದ ರೈಲ್ವೆ ನಿಲ್ದಾಣದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಪ್ರಯಾಣಕ್ಕೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಶುಭ ಹಾರೈಸುತ್ತಿದ್ದ ದೃಶ್ಯ ಕಂಡುಬಂತು. ಮಕ್ಕಳು, ಮಹಿಳೆಯರಿಂದ ಹಿಡಿದು, ವಯಸ್ಕರವರೆಗೆ ವಿವಿಧ ವಯೋಮಾನದವರು ಕುಂಭ ಮೇಳಕ್ಕೆ ಪ್ರಯಾಣಿಸಿದರು.
ಸಂಸದ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ, ಆರ್‌ಎಸ್‌ಎಸ್ ಶಿವಮೊಗ್ಗ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಹಾಗೂ ಬಿಜೆಪಿ, ಸಂಘ ಪರಿವಾರದ ಪ್ರಮುಖರು ರೈಲಿನ ಪ್ರತಿ ಭೋಗಿಗೂ ತೆರಳಿ ಪ್ರಯಾಣಕ್ಕೆ ಶುಭ ಹಾರೈಸಿದರು. ಈ ವೇಳೆ ಜೈ ಶ್ರೀರಾಮ್, ಹರಹರ ಮಹಾದೇವ್, ಮೋದಿ-ಮೋದಿ ಘೋಷಣೆಗಳು ಮೊಳಗಿದವು. ಇದೇ ವೇಳೆ ಸಂಸದ ರಾಘವೇಂದ್ರ ಜೊತೆಗೆ ಹಲವಾರು ಮಂದಿ ಫೋಟೋ ಹಾಗೂ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ರೈಲ್ವೆ ಪ್ಲಾಟ್ ಫಾರಂನಲ್ಲಿ ಕುಟುಂಬ ಸದಸ್ಯರ ಜೊತೆಗೂ ಫೋಟೋಗಳನ್ನು ತೆಗೆದುಕೊಂಡರು.