ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಮತ್ತೆ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನವದೆಹಲಿಯಿಂದಲೇ ಮಾತನಾಡಿದ ಡಿಕೆಶಿ, ಸಿಎಂ ಸ್ಥಾನ ವಿಚಾರವನ್ನು ಬಹಿರಂಗ ಚರ್ಚೆಗೆ ಎಳೆದುಕೊಳ್ಳುವುದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
ದೆಹಲಿಗೆ ತೆರಳಿರುವುದಕ್ಕೆ ಮುಖ್ಯಮಂತ್ರಿ ಸ್ಥಾನದ ಚರ್ಚೆಯೇ ಕಾರಣ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಸಿಎಂ ಸ್ಥಾನಕ್ಕೆ ಸಂಬಂಧಿಸಿದ ವಿಷಯ ನನ್ನ ಮತ್ತು ಪಕ್ಷದ ಹೈಕಮಾಂಡ್ ನಡುವಿನದ್ದು ಮಾತ್ರ. ಇದನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು. ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗುವ ಉದ್ದೇಶದಿಂದಲೇ ದೆಹಲಿಗೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಇನ್ನು ಕಾಂಗ್ರೆಸ್ ಪಕ್ಷದ ಒಳನಿರ್ಣಯಗಳು ಮತ್ತು ಮುಂದಿನ ರಾಜಕೀಯ ಯೋಜನೆಗಳ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, “ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳುವುದು ಸಾಧ್ಯವಿಲ್ಲ. ಇಂತಹ ವಿಷಯಗಳನ್ನು ಪಕ್ಷದ ಮಟ್ಟದಲ್ಲೇ ಚರ್ಚಿಸಲಾಗುತ್ತದೆ. ಯಾವುದೇ ಅಧಿಕೃತ ಮಾಹಿತಿ ನೀಡಬೇಕಾದರೆ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಸ್ಪಷ್ಟನೆ ನೀಡುತ್ತಾರೆ” ಎಂದು ತಿಳಿಸಿದರು.
ಡಿಕೆಶಿಯ ಈ ಹೇಳಿಕೆಗಳು ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ನಡೆಯುತ್ತಿರುವ ಊಹಾಪೋಹಗಳಿಗೆ ತಾತ್ಕಾಲಿಕ ಬ್ರೇಕ್ ಹಾಕುವ ಪ್ರಯತ್ನವೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಆದರೂ, ದೆಹಲಿ ಭೇಟಿಯ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮಾತ್ರ ಇನ್ನಷ್ಟು ಹೆಚ್ಚಾಗಿದೆ.


