ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಪುತ್ರ ರೆಹಾನ್ ವಾದ್ರಾ ತಮ್ಮ ಗೆಳತಿ ಅವಿವಾ ಬೇಗ್ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ವಿಶೇಷ ಸಂದರ್ಭ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ರಣಥಂಬೋರ್‌ನಲ್ಲಿ ನಡೆದಿದೆ ಎನ್ನಲಾಗಿದೆ. ಗಾಂಧಿ–ವಾದ್ರಾ ಕುಟುಂಬ ಮಂಗಳವಾರ ರಣಥಂಬೋರ್‌ಗೆ ಆಗಮಿಸಿ ನಾಲ್ಕು ದಿನಗಳ ಕಾಲ ಅಲ್ಲಿ ತಂಗಿತ್ತು. ಈ ಅವಧಿಯಲ್ಲಿ ರೆಹಾನ್ ಮತ್ತು ಅವಿವಾ ನಿಶ್ಚಿತಾರ್ಥ ನೆರವೇರಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಫೋಟೋಗಳನ್ನು ರೆಹಾನ್ ವಾದ್ರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧಿಕೃತವಾಗಿ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಬರ್ಟ್ ವಾದ್ರಾ, ತಮ್ಮ ಮಗನ ಫೋಟೋ ಹಂಚಿಕೊಂಡು, “ನನ್ನ ಮಗ ಜೀವನದ ಹೊಸ ಹಂತಕ್ಕೆ ಕಾಲಿಟ್ಟಿದ್ದಾನೆ. ಅವನು ಸದಾ ಸಂತೋಷವಾಗಿರಲಿ” ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
ಮೂಲಗಳ ಪ್ರಕಾರ, ರೆಹಾನ್ ಮತ್ತು ಅವಿವಾ ಕಳೆದ ಏಳು ವರ್ಷಗಳಿಂದ ಪರಸ್ಪರ ಪರಿಚಯ ಮತ್ತು ಸ್ನೇಹ ಹೊಂದಿದ್ದು, ಇತ್ತೀಚೆಗೆ ತಮ್ಮ ಸಂಬಂಧದ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದರು. ಇದಕ್ಕೆ ಎರಡೂ ಕುಟುಂಬಗಳಿಂದ ಒಪ್ಪಿಗೆ ವ್ಯಕ್ತವಾಗಿದೆ ಎನ್ನಲಾಗಿದೆ.

