ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲಿನ ರಷ್ಯಾದ ದಾಳಿ ನಡುವೆ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಈ ವೇಳೆ ಏರ್ ಇಂಡಿಯಾ ಜತೆಗೆ ಈಗ ಸ್ಪೈಸ್ ಜೆಟ್ ಹಾಗೂ ಇಂಡಿಗೋ ರೊಮೇನಿಯಾಗೆ ವಿಶೇಷ ವಿಮಾನವನ್ನು ಕಳುಹಿಸಲಿವೆ.
ಇಂದು ಮತ್ತು ನಾಳೆ ಹಂಗೇರಿಯ ರಾಜಧಾನಿ ಬುಡಾಪೆಸ್ಟ್ ಮತ್ತು ರೊಮೇನಿಯಾದ ಬುಕಾರೆಸ್ಟ್‌ನಿಂದ ವಿಶೇಷ ವಿಮಾನಗಳನ್ನು ನಿರ್ವಹಿಸಲಿವೆ. ಇಂದು ಸಂಜೆ ದೆಹಲಿಯಿಂದ ತೆರಳಲಿರುವ ಸ್ಪೈಸ್ ಜೆಟ್ ನ ಬೋಯಿಂಗ್ 737 ಮ್ಯಾಕ್ಸ್ ವಿಶೇಷ ವಿಮಾನ ಬಳಸಲಾಗುತ್ತದೆ.
ಉಕ್ರೇನ್ ನಲ್ಲಿ ವಾಯುಮಾರ್ಗ ಮುಚ್ಚಿರುವುದರಿಂದ ಭಾರತ ರೊಮೋನಿಯಾ ಹಾಗೂ ಹಂಗೇರಿ ಮೂಲಕ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತಿದೆ.
ಉಕ್ರೇನ್ ನಲ್ಲಿ ಸುಮಾರು 16 ಸಾವಿರ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಏರ್ ಇಂಡಿಯಾದ ವಿಶೇಷ ವಿಮಾನಗಳ ಮೂಲಕ 1396 ಭಾರತೀಯರನ್ನು ತಾಯ್ನಾಡಿಗೆ ವಾಪಾಸ್ ಕರೆತರಲಾಗಿದೆ.
ಉಕ್ರೇನ್ ನಲ್ಲಿ ಸಿಲುಕಿರುವವರನ್ನು ಏರ್ ಲಿಫ್ಟ್ ಮಾಡುವ ಕಾರ್ಯಾಚರಣೆಗೆ ಆಪರೇಷನ್ ಗಂಗಾ ಎಂದು ಹೆಸರಿಡಲಾಗಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಮೋದಿ ಸರ್ಕಾರ ಇದೀಗ ನಾಲ್ವರು ಕೇಂದ್ರ ಸಚಿವರನ್ನೇ ಉಕ್ರೇನ್ ಗಡಿ ರಾಷ್ಟ್ರಗಳಿಗೆ ಕಳುಹಿಸಲಿದೆ.