ಪ್ರತಿ ಧರ್ಮಕ್ಕೂ ತನ್ನದೇ ಆದ ಆಧ್ಯಾತ್ಮಿಕ ಸಂಕೇತಗಳಿರುತ್ತವೆ. ಅವು ಕೇವಲ ಚಿನ್ಹೆಗಳಲ್ಲ, ಬದುಕಿನ ತತ್ವ ಮತ್ತು ದೈವೀ ಶಕ್ತಿಯ ಪ್ರತಿನಿಧಿಗಳೂ ಆಗಿವೆ. ಹಿಂದು ಧರ್ಮದಲ್ಲಿಯೂ ಹಲವು ಆಧ್ಯಾತ್ಮಿಕ ಸಂಕೇತಗಳಿದ್ದು, ಪ್ರತಿಯೊಂದು ಸಂಕೇತಕ್ಕೂ ತನ್ನದೇ ಆದ ಕಥೆಗಳು, ತತ್ವಗಳು ಮತ್ತು ಧನಾತ್ಮಕ ಶಕ್ತಿಯ ಪರಿಚಯವಿದೆ. ಇವು ಮಾನವನ ಮನಸ್ಸಿಗೆ ಶಾಂತಿ, ವಿಶ್ವಾಸ ಹಾಗೂ ಆಧ್ಯಾತ್ಮಿಕ ಬಲ ನೀಡುತ್ತವೆ. ಇಲ್ಲಿದೆ ಅಂತಹ ಕೆಲವು ಪ್ರಮುಖ ಸಂಕೇತಗಳ ವಿವರ.
- ಓಂಕಾರ: ಹಿಂದು ಧರ್ಮದ ಮೂಲಭೂತ ಸಂಕೇತವೆಂದರೆ ಓಂಕಾರ. ಇದು ಜಗತ್ತಿನ ಮೊದಲ ಶಬ್ದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಓಂಕಾರದ ಜಪದಿಂದ ದೇಹ ಮತ್ತು ಮನಸ್ಸಿಗೆ ಶಾಂತಿ ದೊರಕುತ್ತದೆ ಹಾಗೂ ಧನಾತ್ಮಕ ಶಕ್ತಿಯ ವಾತಾವರಣ ನಿರ್ಮಾಣವಾಗುತ್ತದೆ.
- ತ್ರಿಶೂಲ: ಭಗವಾನ್ ಶಿವನ ದೈವಿಕ ಆಯುಧವಾದ ತ್ರಿಶೂಲವು ನಿರ್ಭಯತೆ, ಸಂರಕ್ಷಣೆ ಹಾಗೂ ದುಷ್ಟ ಶಕ್ತಿಗಳ ನಾಶದ ಸಂಕೇತವಾಗಿದೆ. ಅದರ ಮೂರು ಅಂಚುಗಳು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ಪ್ರತಿನಿಧಿಸುತ್ತವೆ. ಶಿವನ ಶಕ್ತಿಯ ಪ್ರತೀಕವಾಗಿ ಇದನ್ನು ಪೂಜಿಸಲಾಗುತ್ತದೆ.
- ಸ್ವಸ್ತಿಕ್ : ಹೊಸ ಆರಂಭಗಳ ಶುಭ ಸಂಕೇತವೆಂದರೆ ಸ್ವಸ್ತಿಕ್. ಮನೆ, ವಾಹನ ಅಥವಾ ಯಾವುದೇ ಹೊಸ ಕಾರ್ಯಾರಂಭದಲ್ಲಿ ಇದನ್ನು ಬಳಸಿ ಧನಾತ್ಮಕ ಶಕ್ತಿ ಆವರಿಸಿಕೊಳ್ಳಲು ಉತ್ತಮ. ಇದು ಯಶಸ್ಸು ಹಾಗೂ ಸಮೃದ್ಧಿಯ ಸಂಕೇತವಾಗಿದೆ.
- ಶ್ರೀಯಂತ್ರ: ಸಂಪತ್ತು, ಅದೃಷ್ಟ ಮತ್ತು ಸಮೃದ್ಧಿಯನ್ನು ತರಲು ಬಳಸುವ ಅತ್ಯಂತ ಶಕ್ತಿಶಾಲಿ ಸಂಕೇತವೆಂದರೆ ಶ್ರೀಯಂತ್ರ. ಮಹಾಲಕ್ಷ್ಮಿಯ ರೂಪವೆಂದು ಇದನ್ನು ಪೂಜಿಸಲಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಪ್ರತಿಷ್ಠಾಪಿಸಿದರೆ ಆಧ್ಯಾತ್ಮಿಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
- ವಟವೃಕ್ಷ: ಆಲದ ಮರ ದೀರ್ಘಾಯುಷ್ಯ, ಜ್ಞಾನ ಮತ್ತು ಆರೋಗ್ಯದ ಸಂಕೇತವಾಗಿದೆ. ಮಕ್ಕಳಾಗದ ಮಹಿಳೆಯರು ಸಂತಾನ ಭಾಗ್ಯಕ್ಕಾಗಿ ಇದನ್ನು ಆರಾಧಿಸುತ್ತಾರೆ. ಶ್ರೀಕೃಷ್ಣನು ವಟವೃಕ್ಷದ ಕೆಳಗೆ ವಿಶ್ರಾಂತಿ ಪಡೆದಿದ್ದಾನೆ ಎಂಬ ಐತಿಹ್ಯವೂ ಇದೆ.
- ಶಂಖ: ಪರಿಶುದ್ಧತೆ, ವಿಜಯ ಮತ್ತು ಹೊಸ ಆರಂಭದ ಸಂಕೇತವೆಂದರೆ ಶಂಖ. ವಿಷ್ಣುವಿನ ಕೈಯಲ್ಲಿ ಶಂಖವಿರುವುದು ದೈವೀ ಶಕ್ತಿಯ ಪ್ರತಿನಿಧಿ. ಮಹಾಭಾರತದಲ್ಲಿ ಶ್ರೀಕೃಷ್ಣನ ಪಾಂಚಜನ್ಯ ಶಂಖದ ನಾದವು ದುಷ್ಟ ಶಕ್ತಿಗಳ ನಾಶಕ್ಕೆ ಕಾರಣವಾಯಿತು ಎಂದು ಪುರಾಣಗಳು ಹೇಳುತ್ತವೆ.