ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಜಗತ್ತಿನಲ್ಲಿ ದ್ವೇಷ, ಅಸಹಿಷ್ಣುತೆ ಹೆಚ್ಚುತ್ತಿರುವ ನಡುವೆಯೇ , ವಿಶ್ವ ಮಾನವ ಏಕತೆಯ ಸಂದೇಶ ನೀಡಿದ ಶ್ರೀ ನಾರಾಯಣ ಗುರುಗಳ ಸಂದೇಶ ಪ್ರಸ್ತುತವಾಗುತ್ತದೆ ಎಂದು ಪೋಪ್ ಪ್ರಾನ್ಸಿಸ್ ಅವರು ಭಾನುವಾರ ಹೇಳಿದ್ದಾರೆ.
ಅವರು ಎರ್ನಾಕುಳಂನಲ್ಲಿ ಶ್ರೀನಾರಾಯಣ ಗುರುಗಳಿಂದ ನಡೆದ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವದ ಅಂಗವಾಗಿ ವ್ಯಾಟಿಕನ್‌ನಲ್ಲಿ ಶಿವಗಿರಿ ಮಠವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳನ್ನು ಮತ್ತು ನಾಯಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ದೇಶಗಳು ಮತ್ತು ಜನರ ನಡುವೆ ಅಸಹಿಷ್ಣುತೆ ಮತ್ತು ದ್ವೇಷ ಹರಡುತ್ತಿರುವ ಘಟನೆಗಳು ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಈ ಸಾಮಾಜಿಕ ಸುಧಾರಕನ ಸಂದೇಶ ಇಂದಿನ ನಮ್ಮ ವಿಶ್ವಕ್ಕೆ ಸಂಗತವಾದುದಾಗಿದೆ. ಧರ್ಮಗಳ ಬೋಧನೆಗಳನ್ನು ಎತ್ತಿಹಿಡಿಯುವಲ್ಲಿ ಇಂದು ವಿಶ್ವ ವಿಫಲವಾಗಿದ್ದು, ವಿಷಮ ಸ್ಥಿತಿ ಗೋಚರಿಸುತ್ತಿದೆ ಎಂದು ಅವರು ಹೇಳಿದರು.
ಶ್ರೀ ನಾರಾಯಣ ಗುರುಗಳು , ತಮ್ಮ ಬದುಕನ್ನು ಸಾಮಾಜಿಕ ಮತ್ತು ಧಾರ್ಮಿಕ ಜಾಗೃತಿಗಾಗಿ ಮುಡಿಪಾಗಿಟ್ಟರು. ಅವರ ಸಂದೇಶವು ಮತ,ಜನಾಂಗ, ಸಾಂಸ್ಕೃತಿಕ ಪರಂಪರೆಗಳನ್ನು ಮೀರಿ ಇಡಿ ಮನುಕುಲಕ್ಕೆ ಅನ್ವಯಿಸುವಂಥದ್ದಾಗಿದೆ. ಇಂದು ವಿಶ್ವದಲ್ಲಿ ವಿಭಿನ್ನ ಜನಾಂಗಗಳು ,ಸಾಮಾಜಿಕ ಗುಂಪುಗಳು, ಬಣ್ಣ, ಭಾಷೆ, ಮತಗಳ ಹೆಸರಿನಲ್ಲಿ ತಾರತಮ್ಯ,ಹಿಂಸೆ, ಉದ್ವಿಗ್ನತೆಗಳು ಕಾಣುತ್ತಿವೆ. ಆದರೆ ಇದು ಸಲ್ಲದು ಎಂದು ಅವರು ಹೇಳಿದರು.
ಗ್ರಾಂಡ್ ಇಮಾಮ್ ಆಫ್ ಅಲ್-ಅಝರ್ ಅಹಮ್ಮದ್ ಐತಯ್ಯೆಬ್ ಜೊತೆಗೆ ೨೦೧೯ರಲ್ಲಿ ವಿಶ್ವಶಾಂತಿ ಮತ್ತು ಒಟ್ಟಾಗಿ ಬದುಕುವುದಕ್ಕಾಗಿ ಮಾಡಿಕೊಳ್ಳಲಾದ ಮಾನವ ಸಹೋದರತೆ ಕುರಿತ ಒಪ್ಪಂದವನ್ನು ಉಲ್ಲೇಖಿಸಿದ ಅವರು, ದೇವರು ಎಲ್ಲ ಮಾನವರನ್ನೂ ಸಮಾನ ಹಕ್ಕು, ಕರ್ತವ್ಯ ಮತ್ತು ಘನತೆಗಳೊಂದಿಗೆ ಸೃಷ್ಟಿಸಿದ್ದಾನೆ.ಹೀಗಿರುವ ಎಲ್ಲರೂ ಸಹೋದರ ಸಹೋದರಿಯರಾಗಿ ಒಟ್ಟಾಗಿ ಬಾಳಬೇಕಾದುದು ಅಗತ್ಯ . ಧಾರ್ಮಿಕ ಬೋಧನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇಂದಿನ ಉದ್ವಿಗ್ನತೆಯ ಪರಿಸ್ಥಿತಿಗೆ ಕಾರಣವಾಗಿದೆ . ಇದಕ್ಕೆ ಜಗತ್ತು ಇಂದು ಉತ್ತರ ಕಂಡುಕೊಳ್ಳಬೇಕಾಗಿದೆ . ವಿವಿಧತೆಯಲ್ಲಿ ಏಕತೆಯನ್ನು ಬಲಗೊಳಿಸುವ ಅಗತ್ಯವಿರುವುದನ್ನು ಒತ್ತಿ ಹೇಳಿದ ಅವರು,ಸೌಹಾರ್ದ ಸಹಬಾಳ್ವೆಯನ್ನು ಉತ್ತೇಜಿಸಬೇಕೆಂದರು.