March 28, 2026
Saturday, March 28, 2026
spot_img

ಕೊಹ್ಲಿ-ಪಡಿಕ್ಕಲ್ ಆರ್ಭಟಕ್ಕೆ SRH ತತ್ತರ: ಹೋಮ್ ಗ್ರೌಂಡ್ ನಲ್ಲಿ ಹಾಲಿ ಚಾಂಪಿಯನ್ಸ್‌ಗೆ ಐತಿಹಾಸಿಕ ಜಯ!

19ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ತವರಿನ ಮೈದಾನವಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 202 ರನ್‌ಗಳ ಬೃಹತ್ ಗುರಿಯನ್ನು ತಲುಪಿ ಹೊಸ ಇತಿಹಾಸ ಬರೆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್, ನಾಯಕ ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು. ಕಿಶನ್ ಕೇವಲ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 80 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಅನಿಕೇತ್ ವರ್ಮಾ (43 ರನ್, 18 ಎಸೆತ) ಮತ್ತು ಹೆನ್ರಿಕ್ ಕ್ಲಾಸೆನ್ (31 ರನ್) ಉಪಯುಕ್ತ ರನ್ ಕಾಣಿಕೆ ನೀಡಿದರು.

ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಜಾಕೋಬ್ ಡಫಿ ಕಮಾಲ್ ಮಾಡಿದರು. ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 22 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ರೊಮೆರೊ ಶೆಫರ್ಡ್ ಕೂಡ 3 ವಿಕೆಟ್ ಕಿತ್ತು ಎದುರಾಳಿ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಅಭಿನಂದನ್, ಭುವನೇಶ್ವರ್ ಕುಮಾರ್ ಮತ್ತು ಸುಯೇಶ್ ಶರ್ಮಾ ತಲಾ ಒಂದು ವಿಕೆಟ್ ಹಂಚಿಕೊಂಡರು.

202 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇವಲ 15.4 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ, ಐಪಿಎಲ್ ಇತಿಹಾಸದಲ್ಲೇ 200ಕ್ಕೂ ಹೆಚ್ಚು ರನ್‌ಗಳನ್ನು ಅತ್ಯಂತ ವೇಗವಾಗಿ ಬೆನ್ನಟ್ಟಿದ ದಾಖಲೆಯನ್ನು ಆರ್‌ಸಿಬಿ ತನ್ನ ಹೆಸರಿಗೆ ಬರೆದುಕೊಂಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !