ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತಮಹೋತ್ಸವ ಸಂಭ್ರಮ

ಹೊಸ ದಿಗಂತ ವರದಿ, ಮಂಗಳೂರು:

ಅನ್ನ, ಅಕ್ಷರ, ಅಧ್ಯಾತ್ಮ, ಆರೋಗ್ಯ ಈ ನಾಲ್ಕು ಸಂಗತಿಗಳನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ವ್ರತದಂತೆ ನಡೆಸುತ್ತಿದೆ. ಆ ಮೂಲಕ ಸಮಾಜದಲ್ಲಿ ಕಷ್ಟದಲ್ಲಿ ಇರುವವರಿಗೆ ಮಠವು ಆಸರೆಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖಾ ಮಠದ ರಜತಮಹೋತ್ಸವ, ಭೈರವೈಕ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಕಾವೂರಿನ ಬಿಜಿಎಸ್ ಪಿಯು ಕಾಲೇಜು ಆವರಣದಲ್ಲಿ ಗುರುವಾರ ನಡೆದ ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ, ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆದಿಚುಂಚನಗಿರಿ ಮಠದ ೭೧ ಮಂದಿ ಯತಿಗಳು ಲೋಕೋಪಕಾರವನ್ನು ಶ್ರದ್ಧೆಯಿಂದ ಅನುಷ್ಠಾನ ಮಾಡಿದ್ದಾರೆ. ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರು ಈ ದಿಸೆಯಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಲೌಕಿಕ ಪರಿಜ್ಞಾನ ಹಾಗೂ ಅಧ್ಯಾತ್ಮದ ಅನುಭೂತಿ ಹೊಂದಿರುವ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಈ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದರು.

ಅನುಗ್ರಹ ಸಂದೇಶ ನೀಡಿದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶಾಖಾ ಮಠಗಳು ಆರಂಭವಾಗಲು ಭಕ್ತರು ಕಾರಣ. ಮಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾ ಮಠವನ್ನು ೨೫ ವರ್ಷಗಳ ಕಾಲ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಇತಿಮಿತಿಗಳ ನಡುವೆ ಯಶಸ್ವಿಯಾಗಿ ನಡೆಸಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರದ್ದು ತ್ಯಾಗದ ಬದುಕೇ ಹೊರತು, ಭೋಗದ ಬದುಕಲ್ಲ. ವೈಜ್ಞಾನಿಕತೆಯ ಹಿಂದೆ ಅಧ್ಯಾತ್ಮದ ತಳಹದಿ ಇದೆ ಎಂದರು.

ಆಶೀರ್ವಚನ ನೀಡಿದ ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಎಲ್ಲ ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಆಶಯವಾಗಿತ್ತು. ಸ್ವಾಮೀಜಿ ಅವರ ಆಶಯವನ್ನು ಅವರ ಉತ್ತರಾಧಿಕಾರಿಗಳು ಸಾಕಾರಗೊಳಿಸುತ್ತಿದ್ದಾರೆ ಎಂದರು.

ಆಶೀರ್ವಚನ ನೀಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರದ್ದು ಮಾತೃಹೃದಯವಾಗಿತ್ತು. ಅವರು ಎಲ್ಲರಿಗೂ ತಾಯಿಯಂತಿದ್ದರು. ಎಲ್ಲರನ್ನೂ ಒಳಗೊಂಡು ಆದಿಚುಂಚನಗಿರಿ ಮಠ ಮುನ್ನಡೆಯುತ್ತಿದೆ ಎಂದರು.

ಈ ವೇಳೆ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ರಜತ ತುಲಾಭಾರ ನೆರವೇರಿತು.

ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಯತಿಗಳು ಸಾನಿಧ್ಯ ವಹಿಸಿದ್ದರು.

ಶಾಸಕ ಡಾ. ವೈ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜಿಎಸ್ ಕರಾವಳಿ ಕಲ್ಪತರು ಸ್ಮರಣ ಸಂಚಿಕೆಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ರವಿಕುಮಾರ್, ಮಾಜಿ ಸಚಿವ ಗಂಗಾಧರ ಗೌಡ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಂ.ಎ ಶೇಖರ್, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎನ್. ಎಸ್. ರಾಮೇಗೌಡ ಅತಿಥಿಯಾಗಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಜತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎಸ್. ಪ್ರಕಾಶ್, ಶ್ರೀ ಆದಿಚುಂಚನಗಿರಿ ಮಠದ ಪರಂಪರೆ ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದೆ. ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ತಾನು ಸಾಧನೆ ಮಾಡಿದ ಬಳಿಕ ತನ್ನದೇ ಹಾದಿಯಲ್ಲಿ ನಡೆಯುವಂತೆ ಉತ್ತರಾಧಿಕಾರಿಗಳನ್ನು ರೂಪಿಸಿದ್ದಾರೆ. ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಆದಿಚುಂಚನಗಿರಿ ಮಂಗಳೂರು ಶಾಖಾ ಮಠ ಹಾಗೂ ಬಿಜಿಎಸ್ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಕಟ್ಟಿ ಬೆಳೆಸಿದ್ದಾರೆ. ಜಗತ್ತು ಉಳಿಯಬೇಕಾದರೆ ಭಾರತೀಯ ಮೌಲ್ಯಗಳು ಉಳಿಯಬೇಕು. ಭಾರತೀಯ ಮೌಲ್ಯಗಳು ಉಳಿಯಲು ಹಿಂದು ಪರಂಪರೆ ಉಳಿಯಬೇಕು. ಈ ಕೆಲಸವನ್ನು ಆದಿಚುಂಚನಗಿರಿ ಸಹಿತ ಮಠಗಳು ಮಾಡುತ್ತಿವೆ ಎಂದರು.

ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಪಿಎಚ್‌ಡಿ ಪ್ರಬಂಧದ ಇಂಗ್ಲಿಷ್ ಅನುವಾದ ಪುಸ್ತಕ ಹಾಗೂ ಕರಾವಳಿಯ ಒಕ್ಕಲಿಗರು ಪುಸ್ತಕ ಈ ವೇಳೆ ಬಿಡುಗಡೆಗೊಂಡಿತು.

ಕಾರ್ಯಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿದರು. ಪ್ರಶಾಂತ್ ಪೈ ವಂದಿಸಿದರು. ಸುಬ್ರಹ್ಮಣ್ಯ ಸಿ. ಹಾಗೂ ಕೀರ್ತಿರಾಜ್ ಕರಂದಾಡಿ ಕಾರ್ಯಕ್ರಮ ನಿರೂಪಿಸಿದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!