ಹೊಸದಿಗಂತ ವರದಿ,ಚಿತ್ರದುರ್ಗ:
ಐತಿಹಾಸಿಕ ಚಿತ್ರದುರ್ಗದ ಮೇಲುದುರ್ಗದಲ್ಲಿರುವ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಅಂಗವಾಗಿ ನಗರದ ಕೋಟೆ ರಸ್ತೆಯಲ್ಲಿನ ಪಾದಗುಡಿಯ ಆವರಣದಲ್ಲಿ ಶನಿವಾರ ಸಂಜೆ ಏಕನಾಥೇಶ್ವರಿ ದೇವಿ ಸಿಡಿ ಉತ್ಸವ ನಡೆಯಿತು.
ಇದೇ ಪ್ರಥಮ ಬಾರಿಗೆ ಸಿಡಿ ಉತ್ಸವದಲ್ಲಿ ಮಳೆಯ ಆಗಮನವಾಯಿತು. ಸುರಿವ ಮಳೆಯನ್ನೂ ಲೆಕ್ಕಿಸದೆ ಭಕ್ತರು ಸಿಡಿ ಆಡಿದರು. ಮಳೆಯಲ್ಲಿ ಮಿಂದರೂ ಜನ ಸಿಡಿ ವೀಕ್ಷಿಸಿ ಭಕ್ತಿಭಾವ ಮೆರೆದರು.
ನಗರ ದೇವತೆ ಏಕನಾಥೇಶ್ವರಿ ದೇವಿಯ ಸಿಡಿ ಉತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಸಂಜೆಯ ಗೋಧೂಳಿ ಸಮಯ ಆರಂಭವಾಗುತ್ತಿದ್ದಂತೆ ಸಿಡಿ ಉತ್ಸವದ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು. ಸಂಜೆ ಪಶ್ಚಿಮ ದಿಗಂತ ಕೆಂಪಾಗುತ್ತಿದ್ದಂತೆ ಏಕನಾಥೇಶ್ವರಿ ದೇವಿಯ ಪವಿತ್ರ ಕಳಶ ಮತ್ತು ದಂಡವನ್ನು ೪೦ ಅಡಿ ಉದ್ದ ೨ ಅಡಿ ವ್ಯಾಸದ ಬೃಹತ್ ಸಿಡಿ ಕಂಬಕ್ಕೆ ಕಟ್ಟಲಾಯಿತು. ಗ್ರಾಮದ ಹಿರಿಯರಿಂದ ಸೂಚನೆ ದೊರೆಯುತ್ತಿದ್ದಂತೆ ಸಿಡಿ ಕಂಬವನ್ನು ಮೂರು ಬಾರಿ ಭಕ್ತರ ಉದ್ಘೋಷದ ನಡುವೆ ತಿರುಗಿಸಲಾಯಿತು. ಜಾನಪದ ಮೇಳಗಳಾದ ಡೊಳ್ಳು ಕುಣಿತ, ಹಲಗೆ ಮೇಳ, ಉರುಮೆ ಮತ್ತು ವಾಲಗಗಳ ಸದ್ದು ಉತ್ಸವಕ್ಕೆ ಕಳೆ ನೀಡಿತ್ತು.
ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಶನಿವಾರ ಮುಂಜಾನೆಯಿಂದಲೇ ಏಕನಾಥೇಶ್ವರಿ ದೇವಿಯ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು. ಬಿಸಿಲಿನ ತಾಪ ಭಕ್ತರನ್ನು ಕಾಡುತ್ತಿದ್ದರೂ, ಜನರ ಭಕ್ತಿ ಮತ್ತು ಉತ್ಸಾಹ ಕಡಿಮೆಯಾಗಿರಲಿಲ್ಲ. ವಿವಿಧ ಗ್ರಾಮಗಳ ರೈತರು ಪ್ರತಿ ವರ್ಷ ತಮ್ಮ ಎತ್ತುಗಳನ್ನು ಸಿಂಗರಿಸಿ, ಕಮಾನು ಗಾಡಿಯಲ್ಲಿ ಪಾನಕದ ಹಂಡೆಗಳನ್ನು ಇಟ್ಟುಕೊಂಡು ವಾದ್ಯಗಳೊಂದಿಗೆ ಬರುವ ದೃಶ್ಯ ಸಾಮಾನ್ಯವಾಗಿತ್ತು.
ನಗರ ದೇವತೆ ಏಕನಾಥೇಶ್ವರಿ ದೇವಿಯ ಸಿಡಿ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು. ಶನಿವಾರ ಸಂಜೆ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಸಿಡಿ ಏರುವ ಭಕ್ತರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಸಿಡಿ ಕಂಬದ ಬಳಿ ಕರೆತರಲಾಯಿತು. ಕಂಬಕ್ಕೆ ದೊಡ್ಡೆಡೆ ಸೇವೆಯನ್ನು ಸಲ್ಲಿಸಿ, ಸಿಡಿ ಆಚರಿಸಲಾಯಿತು. ಸಿಡಿ ಕಂಬವನ್ನು ಏರಿದರೆ ಕುಟುಂಬಕ್ಕೆ ಒಳಿತಾಗುವುದು ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ ಅನೇಕ ಭಕ್ತರು ದೇವಿಗೆ ಉರುಳು ಸೇವೆ ಹಾಗೂ ದಿಂಡು ಸೇವೆ ಮಾಡಿ ಹರಕೆ ಸಲ್ಲಿಸಿದರು.
ವೈಭವದ ಸಿಡಿ ಉತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ದೇವಿಗೆ ಜಯ ಘೋಷಗಳನ್ನು ಕೂಗಿದರು. ಸಿಡಿ ಉತ್ಸವಕ್ಕೆ ಆಗಮಿಸಿದ್ದ ಭಕ್ತರು ಉತ್ತಮ ಮಳೆ, ಬೆಳೆಗಾಗಿ ದೇವಿಯ ಮೊರೆ ಹೋದರು. ಉತ್ಸವ ಮೂರ್ತಿಯೊಂದಿಗೆ ಭಕ್ತರು ಹಲಗೆ ಮೇಳ, ವಾದ್ಯ ಮೇಳ ಮತ್ತು ಕಲಾ-ಮೇಳಗಳೊಂದಿಗೆ ಹೆಜ್ಜೆ ಹಾಕಿದರು. ಸುಮಾರು ೮ ರಿಂದ ೧೦ ಜನ ಭಕ್ತರು ಸಿಡಿ ಅಡಿದರು. ಇವರು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ದೇವಿಯಲ್ಲಿ ಹರಕೆ ಹೊತ್ತಿದ್ದು, ಹರಕೆ ಈಡೇರಿಸುವಂತೆ ಸಿಡಿ ಅಡಲಾಗುತ್ತದೆ. ನವ ದಂಪತಿಗಳು, ಮಹಿಳೆಯರು ಮತ್ತು ಪುರುಷರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.