ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಶ್ರೀಲಂಕಾ (Sri Lanka vs Afghanistan) ಗುರುವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಐಸಿಸಿ ಟ್ರೋಫಿ ಗೆದ್ದ ಲಂಕಾ ತಂಡದ ಮಾಜಿ ನಾಯಕ ದಸುನ್ ಶನಕ (Dasun Shanaka) ಅವರನ್ನು ಕೈಬಿಡಲಾಗಿದೆ.
ಇದರ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ನುವಾನಿಡು ಫೆರ್ನಾಂಡೊ ಮತ್ತು ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅವರನ್ನು ಸಹ ಏಕದಿನ ತಂಡದಿಂದ ಕೈಬಿಡಲಾಗಿದೆ. ಉಳಿದಂತೆ ಕುಸಾಲ್ ಮೆಂಡಿಸ್ (Kusal Mendis) ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ.
ದಸುನ್ ಶನಕ ಅವರ ನಾಯಕತ್ವದಲ್ಲಿ ಏಷ್ಯಾಕಪ್ ಆಡಿದ್ದ ಲಂಕಾ ತಂಡ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು.
ಅಂತಿಮವಾಗಿ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಒಂಬತ್ತನೇ ಸ್ಥಾನವನ್ನು ಗಳಿಸಿತ್ತು. ಅದರ ನಂತರ ತಂಡದ ಕಳಪೆ ಪ್ರದರ್ಶನದ ಹೊಣೆ ಹೊತ್ತ ದಸುನ್ ಶನಕ ನಾಯಕತ್ವವನ್ನು ತೊರೆದಿದ್ದರು. ಅಂದಿನಿಂದ ಕುಸಾಲ್ ಮೆಂಡಿಸ್ ಶ್ರೀಲಂಕಾ ತಂಡದ ನಾಯಕತ್ವ ವಹಿಸುತ್ತಿದ್ದಾರೆ.
ಏಕದಿನ ವಿಶ್ವಕಪ್ ನಂತರ ನಡೆದ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶನಕ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ ಇಡೀ ಸರಣಿಯಲ್ಲಿ ಶನಕ ಅವರ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ಇದೀಗ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದೆ.
ಶ್ರೀಲಂಕಾ ತಂಡ: ಕುಸಲ್ ಮೆಂಡಿಸ್ (ನಾಯಕ), ಚರಿತ್ ಅಸಲಂಕ (ಉಪನಾಯಕ), ಪಾತುಮ್ ನಿಸ್ಸಂಕ, ಅವಿಷ್ಕ ಫೆರ್ನಾಂಡೋ, ಸದೀರ ಸಮರವಿಕ್ರಮ, ಜನಿತ್ ಲಿಯಾನಗೆ, ವನಿಂದು ಹಸರಂಗ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ, ಪ್ರಮೋದ್ ಮದುಶನ್, ಸಹನ್ ಆರಾಚ್ಚಿಗೆ, ಅಕಿಲ ದನಂಜಯ, ದುನಿತ್ ವೆಲ್ಲಲಾಗೆ, ಚಾಮಿಕ ಕರುಣಾರತ್ನೆ, ಶೆವೊನ್ ಡೇನಿಯಲ್.