ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ನೌಕಾಪಡೆ ಕಚ್ಚತೀವು ಬಳಿ ರಾಮೇಶ್ವರಂನ 11 ಮೀನುಗಾರರನ್ನು ಬಂಧಿಸಿದೆ .
ಶ್ರೀಲಂಕಾ ನೌಕಾಪಡೆಯು ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು (ಐಎಂಬಿಎಲ್) ಮೀರಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಮೀನುಗಾರರನ್ನು ಪದೇ ಪದೇ ಬಂಧಿಸುತ್ತಿದೆ. ಅಲ್ಲದೇ, ಇದೀಗ ಅವರ ದೋಣಿಗಳನ್ನು ಶ್ರೀಲಂಕಾ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು, ಅವುಗಳನ್ನು ರಾಜ್ಯದ ಆಸ್ತಿ ಎಂದು ಘೋಷಿಸಿದ್ದಾರೆ.
ಇದೀಗ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಮೀನುಗಾರರ ಬಂಧನವನ್ನು ಖಂಡಿಸಿ ಹಾಗೂ ಅವರನ್ನು ಸುರಕ್ಷಿತವಾಗಿ ಹಿಂದಿರುಗಿಸುವಂತೆ ಒತ್ತಾಯಿಸಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಮೀನುಗಾರರು ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ಗಸ್ತು ತಿರುಗುತ್ತಿದ್ದ ಶ್ರೀಲಂಕಾದ ಕರಾವಳಿ ಕಾವಲು ಪಡೆ 11 ಜನರನ್ನು ಕಡಲ ಗಡಿಯನ್ನು ಮೀರಿ ಅಕ್ರಮ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಬಂಧಿಸಿದೆ. ಅವರ ಮೋಟಾರು ದೋಣಿಯನ್ನೂ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಂಧಿತ ಮೀನುಗಾರರನ್ನು ಕಂಕಸಂತುರೈ ಬಂದರಿಗೆ ಕರೆದೊಯ್ದು ಶ್ರೀಲಂಕಾದ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಈ ಘಟನೆಯು ತಮಿಳುನಾಡಿನ ಮೀನುಗಾರರ ಸಮುದಾಯದಲ್ಲಿ ತೀವ್ರ ಸಂಕಟವನ್ನು ಉಂಟುಮಾಡಿದೆ. ಅವರನ್ನು ಈಗಾಗಲೇ ಹಲವು ಬಾರಿ ಶ್ರೀಲಂಕಾ ಅಧಿಕಾರಿಗಳು ಬಂಧಿಸಿ ಅವರ ಬೋಟುಗಳನ್ನ ವಶಪಡಿಸಿಕೊಂಡಿದ್ದರು. ಇದೀಗ ಬಂಧಿತ ಮೀನುಗಾರರ ಕುಟುಂಬಗಳು ಭಾರತ ಸರ್ಕಾರಕ್ಕೆ ತೀವ್ರ ಮನವಿ ಸಲ್ಲಿಸಿದ್ದು, ಮೀನುಗಾರರ ಬಿಡುಗಡೆಗೆ ಶೀಘ್ರ ರಾಜತಾಂತ್ರಿಕ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿದ್ದಾರೆ.