ಹೊಸದಿಗಂತ ವರದಿ ಬಳ್ಳಾರಿ:
ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀರಾಘವೇಂದ್ರ ಸ್ವಾಮಿ ಶ್ರೀಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಗಳವರ 352ನೇ ಆರಾಧನೆ ಮಹೋತ್ಸವವನ್ನು ಶನಿವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ಮಹೋತ್ಸವ ಹಿನ್ನೆಲೆ ಬೆಳಿಗ್ಗೆ ಶ್ರೀಮಠದ ಪಂ.ಪ್ರಸನ್ನ ಆಚಾರ್ ಅವರ ನೇತೃತ್ವದಲ್ಲಿ ಅಷ್ಟೋತ್ತರ ಪಾರಾಯಣ, ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಮಹಾ ನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.
ಪಂ.ಪ್ರಸ್ನ ಆಚಾರ್ ಅವರು ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀಮಠದಿಂದ ಪ್ರಾರಂಭವಾಗಿ ಶ್ರೀ ರಾಘವೇಂದ್ರ ಸ್ವಾಮೀ ವೃತ್ತ ಸೇರಿದಂತೆ ನಾನಾ ಪ್ರಮುಖ ರಸ್ತೆಗಳ ಮೂಲಕ ಶ್ರೀಮಠಕ್ಕೆ ತಲುಪಿತು. ಈ ವೇಳೆ ನಗರದ ಶ್ರೀ ಮಧ್ವ ಮಹಿಳಾ ಭಜನಾ ಮಂಡಳಿ ಸೇರಿದಂತೆ ವಿವಿಧ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಸಾಮೋಹಿಕ ಭಜನೆ, ಮಕ್ಕಳು, ಮಹಿಳೆಯರಿಂದ ಕೋಲಾಟ, ಡೊಳ್ಳು ಕುಣಿತ ಗಮನಸೆಳೆದವು.
ಯುವಕರು, ಮಹಿಳೆಯರು, ಮಕ್ಕಳು ರಥೋತ್ಸವದಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಆರಾಧನೆ ಮಹೋತ್ಸವ ಹಿನ್ನೆಲೆ ಶ್ರೀಮಠ ವಿವಿಧ ಬಣ್ಣಗಳ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಗುರುರಾಯರಿಗೆ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಪಂ.ನರಹರಿ ಆಚಾರ್ ಹಾಗೂ ಸಿಬ್ಬಂದಿಗಳು, ಅಪಾರ ಭಕ್ತರು ಭಾಗವಹಿಸಿದ್ದರು.