ಹುಬ್ಬಳ್ಳಿಯ ಇಸ್ಕಾನ್ ಮಂದಿರದಲ್ಲಿ ಸೆ.7ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ರಾಯಾಪುರದಲ್ಲಿರುವ ಇಸ್ಕಾನ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೆ.7 ರಂದು ಆಚರಿಸಲಾಗುವುದು ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಅಂದು ಬೆಳಿಗ್ಗೆ8 ರಿಂದ ರಾತ್ರಿ 9 ರವರೆಗೆ ಅರ್ಚನೆ ಮತ್ತು ಆರತಿಗಳು ನಿರಂತರವಾಗಿ ದೇವಸ್ಥಾನದ ಮುಖ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಶ್ರೀಕೃಷ್ಣ ಬಲರಾಮರಿಗೆ 108 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಗುವುದು. ಬೆಳಿಗ್ಗೆ 11 ರಿಂದ ರಾತ್ರಿ 8:30 ರವರೆಗೆ ಲಡ್ಡುಗೋಪಾಲನಿಗೆ ತೊಟ್ಟಿಲೋತ್ಸವ, ನೈವೇದ್ಯದ ನಂತರ ಭಕ್ತಾಧಿಗಳಿಗಾಗಿ ದರ್ಶನಕ್ಕೆ ಇಟ್ಟು, ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಗುವುದು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ರಾತ್ರಿ 9:30 ಕ್ಕೆ ಕೃಷ್ಣ ಬಲರಾಮರಿಗೆ ಮಹಾ ಅಭಿಷೇಕ ಪ್ರಾರಂಭವಾಗಿ ರಾತ್ರಿ 12 ಕ್ಕೆ ಸಮಾರೋಪಗೊಳ್ಳಲಿದೆ. ಉತ್ಸವದ ನಿಮಿತ್ತ ಸಾರಿಗೆ ಸೇವೆಯನ್ನು ಸಾರಿಗೆ ಸಂಸ್ಥೆ, ಬೇಂದ್ರೆ ಸಾರಿಗೆ ಸಂಸ್ಥೆಯವರಿಗೆ ಬೆಳಗಿನ 11 ರಿಂದ ರಾತ್ರಿ 1:30 ರವರೆಗೆ ವಿಸ್ತರಿಸಲು ಕೋರಲಾಗಿದೆ ಎಂದರು.

ಸೆ.8 ರಂದು ಇಸ್ಕಾನ್ ಸಂಸ್ಥಾಪನಾಚಾರ್ಯ ಎ.ಸಿ. ಭಕ್ತಿವೇದಾಂತ ಸ್ವಾಮೀಜಿಗಳ 127ನೇ ಪ್ರಾಕಟ್ಯ ದಿನ ಆಚರಿಸಲಾಗುವುದು. ಅಂದು ಮಧ್ಯಾಹ್ನ 12 ಗಂಟೆವರೆಗೆ ಭಕ್ತರು ಉಪವಾಸವನ್ನು ಆಚರಿಸಿ, ನೈವೇದ್ಯಕ್ಕೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸುತ್ತಾರೆ. ನೂರಾರು ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ 4000 ಭಕ್ಷ್ಯಗಳನ್ನು ಇಸ್ಕಾನ್ ಮಂದಿರದ ಸಾಂಸ್ಕೃತಿಕ ಭವನದಲ್ಲಿ ನೈವೇದ್ಯಕ್ಕಾಗಿ ಇಡಲಾಗುವುದು. ಬಳಿಕ ಪ್ರಸಾದ ರೂಪದಲ್ಲಿ ಭಕ್ತಾಧಿಗಳಿಗೆ ಹಂಚಲಾಗುವುದು ಎಂದು ಹೇಳಿದರು.
ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!