ಹೊಸದಿಗಂತ ವರದಿ, ಗೋಣಿಕೊಪ್ಪ
ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್)ದ ವತಿಯಿಂದ ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಶ್ರೀ ರಾಮ ವಿಜಯ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಈ ಸಂದರ್ಭ ಹರೇ ರಾಮ, ಹರೇ ಕೃಷ್ಣ ನಾಮಸ್ಮರಣೆ ಅನುರಣಿಸಿತು.
ಪಟ್ಟಣದ ಉಮಾಮಹೇಶ್ವರಿ ದೇವಸ್ಥಾನದ ಬಳಿ ಡಾ. ಮುಕ್ಕಾಟಿರ ಅಮೃತ್ ನಾಣಯ್ಯ, ಆರ್.ಎಸ್ .ಎಸ್. ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮತ್ತಿತರ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ರಥದ ಎದುರು ಈಡುಕಾಯಿ ಒಡೆದು ಭಕ್ತಿ ಮೆರೆದರು.
ರಥೋತ್ಸವ ಸಮಿತಿ ಸಂಚಾಲಕ ಗಿರಿಧರ ಶ್ಯಾಮ್ ದಾಸ್ ನೇತೃತ್ವದಲ್ಲಿ ನೂರಾರು ಮಹಿಳೆಯರು ಮತ್ತು ಮತ್ತು ಪುರುಷರು ಎಳೆದ ರಥ ಬೈಪಾಸ್ ಮೂಲಕ ತೆರಳಿ ಪೊನ್ನಂಪೇಟೆ ಜಂಕ್ಷನ್ ಮತ್ತು ಗೋಣಿಕೊಪ್ಪಮುಖ್ಯ ರಸ್ತೆ ಮೂಲಕ ಸಂಚರಿಸಿ ಉಮಾಮಹೇಶ್ವರಿ ದೇವಸ್ಥಾನಕ್ಕೆ ತಲುಪಿತು.
ಕೇಸರಿ ಶಾಲು ಹೊದ್ದ ಮಹಿಳೆಯರು ಮತ್ತು ಪುರುಷರು ರಾಮ ಮಂತ್ರ ಜಪಿಸಿ ರಥ ಎಳೆದುದು ವಿಶೇಷವಾಗಿತ್ತು. ದಾರಿಯುದ್ದಕ್ಕೂ ಜೈ ಶ್ರೀ ರಾಮ್ ಘೋಷಣೆ ಮೊಳಗಿತು. ರಥದ ಎದುರು ಭಕ್ತರು ಡೊಳ್ಳು, ತಾಳ ಬಡಿದುಕೊಂಡು ರಾಮನ ಸ್ಮರಣೆ ಮಾಡಿದರು. ರಾಮನ ಕುರಿತಾದ ಹಾಡುಗಳ ಗಾಯನ ಮತ್ತು ತಾಳಕ್ಕೆ ತಕ್ಕಂತೆ ದಾರಿಯುದ್ದಕೂ ಹೆಜ್ಜೆ ಹಾಕಿದ ಭಕ್ತರು ಭಕ್ತಿ ಭಾವ ಮೆರೆದರು. ಹಲವು ಮಕ್ಕಳು ಪುರಾಣ ಪುರುಷರ ವೇಷ ಭೂಷಣ ಧರಿಸಿ ಉತ್ಸವದಲ್ಲಿ ಭಾಗವಹಿಸಿದ್ದರು.
ಇಸ್ಕಾನ್’ನ ಹಿರಿಯ ಸನ್ಯಾಸಿಗಳು ಭವದ್ಗೀತೆ, ರಾಮಾಯಣ ಮತ್ತು ಮಹಾಭಾರತದ ಮಹತ್ವ ಕುರಿತು ಪ್ರವಚನ ನೀಡಿದರು. ಹಿರಿಯ ಭಕ್ತರು ಏಕ ಕಂಠದಿಂದ ರಾಮನಾಮ ಸ್ಮರಣೆ ಮಾಡಿದ್ದು ವಿಶೇಷವಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ