ದಿಗಂತ ವರದಿ ವಿಜಯನಗರ:
2023-24 ನೇ ಸಾಲಿನ ಜಿಲ್ಲೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಕುಸಿತಕ್ಕೆ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯನಗರ ಜಿಲ್ಲೆಯ ಡಿಡಿಪಿಐ ಯುವರಾಜ ನಾಯ್ಜ, ಹೊಸಪೇಟೆ ಬಿಇಒ ಚನ್ನಬಸಪ್ಪ ಅವರನ್ನು ಅಮಾನುತುಗೊಳಿಸುವಂತೆ ಆದೇಶಿಸಿದರು.
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶಿಕ್ಷಣ ಇಲಾಖೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಎಸ್ ಎಸ್ ಎಲ್ ಸಿ ಪರೀಕ್ಷೆ ಕುಸಿತಕ್ಕೆ ನೀವೇ ಕಾರಣ. ನೀವು ನಿಷ್ಠೆಯಿಂದ ಕೆಲಸ ಮಾಡಿದ್ದರೆ, ಜಿಲ್ಲೆಯ ಫಲಿತಾಂಶ ರಾಜ್ಯ ಮಟ್ಟದಲ್ಲಿ 10 ನೇ ರ್ಯಾಂಕ್ ನಿಂದ 27 ನೇ ಸ್ಥಾನಕ್ಕೆ ಕುಸಿಯುತ್ತಿರಲಿಲ್ಲ.
10 ನೇ ತರಗತಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು, ಬಿಇಒಗಳ ಪ್ರಯತ್ನವೇನು? ಈ ಬಾರಿ 20 ರಷ್ಟು ಅಂಕಗಳನ್ನು ಗ್ರೇಸ್ ಮಾರ್ಕ್ಸ ನೀಡಿದ್ದರೂ ಫಲಿತಾಂಶ ಈ ಮಟ್ಟಕ್ಕೆ ಕುಸಿದಿದೆ ಎಂದರೆ ನಿಮ್ಮ ಕಾರ್ಯವೈಖರಿಯನ್ನು ತಿಳಿಸುತ್ತದೆ ಎಂದು ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡರು.
ಇದೇ ವೇಳೆ ಫೋನ್ ಮೂಲಕ ಶಿಕ್ಷಣ ಇಲಾಖೆ ಕಾರ್ಯದರ್ಶಿಯನ್ನು ಸಂಪರ್ಕಿಸಿ, ಡಿಡಿಪಿಐ ಯುವರಾಜ್ ನಾಯ್ಕ, ಬಿಇಒ ಚೆನ್ನಬಸಪ್ಪ ಅವರನ್ನು ತಕ್ಷಣ ಅಮಾನತು ಮಾಡುವಂತೆ ಆದೇಶಿಸಿದರು. ಅಲ್ಲದೇ, ಡಿಡಿಪಿಐ ಹಾಗೂ ಬಿಇಒ ಅವರನ್ನು ಸಭೆಯಿಂದ ಹೊರಗೆ ಕಳುಹಿಸಿದರು.