ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಾರ್ಟ್ಮೆಂಟ್ ಕಟ್ಟಡದ 12ನೇ ಮಹಡಿಯ ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ಎಸ್ಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ದಾರುಣ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ಸಂಭವಿಸಿದೆ.
ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ತಾಝ್ ಅಹಮ್ಮದ್ ಮತ್ತು ಖಮರ್ಜಹಾ ಬಾನು ಇವರ ಹಿರಿಯ ಪುತ್ರಿ ಹಿಬಾ ಐಮನ್ (15) ಸಾವನ್ನಪ್ಪಿರುವ ಬಾಲಕಿ.
18 ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12ನೇ ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ನಿನ್ನೆ ರಾತ್ರಿ ದಂಪತಿ ಇಬ್ಬರೂ ರಾತ್ರಿ ಪಾಳಿ ಕರ್ತವ್ಯಕ್ಕೆ ಆಸ್ಪತ್ರೆಗೆ ತೆರಳಿದ್ದರು.
ಮನೆಯಲ್ಲಿ ಹಿಬಾ ಮತ್ತು ಆಕೆಯ ಕಿರಿಯ ಸಹೋದರ ಮಾತ್ರ ಇದ್ದರು. ಹಿಬಾ ರಾತ್ರಿ ಬಾಲ್ಕನಿಯಲ್ಲಿ ಬಟ್ಟೆ ಹಾಕಲೆಂದು ಕುರ್ಚಿಯಲ್ಲಿ ನಿಂತಾಗ ಆಯತಪ್ಪಿ ವಸತಿ ಸಂಕೀರ್ಣದ ಕಟ್ಟಡದಿಂದ ಕೆಳಗಡೆ ಬಿದ್ದು ಸಾವನ್ನಪ್ಪಿದ್ದಾಳೆಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
ಮೃತ ಹಿಬಾ ಮಂಗಳೂರಿನ ಯೆನೆಪೋಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾರ್ಥಿನಿ. ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.