ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ತಂದಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಈ ವರ್ಷದಿಂದ ತೆಗೆಯಲಾಗಿದ್ದು, 2024ಕ್ಕೂ ಹಿಂದೆ ಇದ್ದಂತೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು ಶೇ 35ಕ್ಕೆ ನಿಗದಿ ಮಾಡಲಾಗಿದೆ.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಸಿದ್ಧತೆ ಕುರಿತು ಶಿಕ್ಷಣ, ಗೃಹ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು, ಉಪ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಸಿಇಒಗಳೊಂದಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತುಕತೆ ನಡೆಸಿದರು.
ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನಸ್ಥಿತಿಗೆ ಅಡ್ಡಿಯಾಗಿದೆ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಲ್ಲದೆ, ವಿವಿಧ ವಲಯಗಳಿಂದ ತೀವ್ರ ಟೀಕೆಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೇಸ್ ಅಂಕಗಳನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಧು ಬಂಗಾರಪ್ಪಹೇಳಿದರು.
ವೆಬ್ ಕಾಸ್ಟಿಂಗ್ ಕಣ್ಗಾವಲು ವ್ಯವಸ್ಥೆ ಜಾರಿಯಿಂದ ಕಳೆದ ಬಾರಿ ತೀವ್ರವಾಗಿ ಕುಸಿದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಜಾರಿಗೆ ತಂದಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಈ ಬಾರಿ ಇರುವುದಿಲ್ಲ. ಆದರೆ, ಕೆಲವೇ ಅಂಕಗಳಿಂದ ಉತ್ತೀರ್ಣ ಅವಕಾಶ ತಪ್ಪುವ ಮಕ್ಕಳನ್ನು ಮೇಲೆತ್ತಲು ಈ ಹಿಂದೆ ಇದ್ದಂತೆ ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಗ್ರೇಸ್ ಅಂಕ ನೀಡುವ ಪದ್ಧತಿ ಮುಂದುವರೆಯಲಿದೆ. ಇದರಿಂದ ಕಳೆದ ಬಾರಿ ಒಟ್ಟಾರೆ ಶೇ.20ರಷ್ಟು ಗ್ರೇಸ್ ಅಂಕ ನೀಡಲು ಇದ್ಧ ಅವಕಾಶ ಈಗ ಶೇ.10ಕ್ಕೆ ಸೀಮಿತವಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ 35 ಅಂಕಗಳನ್ನು ಗಳಿಸಬೇಕು. ಇತರ ವಿಷಯಗಳಲ್ಲಿ, ವಿದ್ಯಾರ್ಥಿಯು ಲಿಖಿತ ಪರೀಕ್ಷೆಯಲ್ಲಿ 28 ಅಂಕಗಳನ್ನು ಪಡೆಯಬೇಕು. ಆಂತರಿಕ ಅಂಕಗಳ ಜೊತೆಗೆ, ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಉತ್ತೀರ್ಣನಾಗಲು 35 ಅಂಕಗಳನ್ನು ಗಳಿಸಬೇಕು ಎಂದಿದ್ದಾರೆ.