ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡನೇ ತರಗತಿಯ ವಿದ್ಯಾರ್ಥಿನಿಯನ್ನು ತರಗತಿಯೊಳಗೆ ಬೀಗ ಹಾಕಿದ್ದರಿಂದ ಆಕೆ ರಾತ್ರಿ ಪೂರ್ತಿ ಕಿಯೋಂಜರ್‌ನ ಅಂಜಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಲ ಕಳೆದಿರುವ ಆತಂಕಕಾರಿ ಘಟನೆ ನಡೆದಿದೆ. ಈ ವರದಿ ಬೆನ್ನಲ್ಲೇ ಶಾಲಾ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ.
ಈ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರಾದ ಗೌರ ಹರಿ ಮಹಾಂತ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಅವರನ್ನು ಬನ್ಸಪಾಲ್ ಬ್ಲಾಕ್‌ನ ಬ್ಲಾಕ್ ಶಿಕ್ಷಣ ಅಧಿಕಾರಿ ಮುಂದೆ ಹಾಜರಾಗುವಂತೆ ನಿರ್ದೇಶಿಸಲಾಗಿದೆ.
ಎರಡನೇ ತರಗತಿ ವಿದ್ಯಾರ್ಥಿನಿ ಜ್ಯೋತ್ಷ್ನಾ ದೇಹುರಿ ತರಗತಿ ಒಳಗಿದ್ದರು. ಇದು ಗೊತ್ತಾಗದೇ ಶಾಲೆಯ ಸಿಬ್ಬಂದಿ ನಿನ್ನೆ ಸಂಜೆ 4ಕ್ಕೆ ಶಾಲಾ ಆವರಣದ ಕೊಠಡಿಗೆ ಬೀಗ ಹಾಕಿದ್ದಾರೆ. ಈ ನಡುವೆ ಮಗಳು ಕಣ್ಮರೆ ಆಗಿದ್ದಾರೆ ಎಂದು ಆಕೆಯ ಪೋಷಕರು ಹುಡುಕಾಟ ನಡೆಸಿದ್ದಾರೆ. ಅತ್ತ ಶಾಲೆಯಲ್ಲಿ ಉಳಿದ ಮಗು ಹೇಗಾದರೂ ಹೊರಗೆ ಬರಬೇಕು ಎಂದು ಪ್ರಯತ್ನ ಮಾಡಿದೆ. ಕಿಟಕಿ ಮುರಿಯಲು ಪ್ರಯತ್ನಿಸಿ ವಿಫಲವಾಗಿದೆ. ಹೊರ ಬರಲು ಆಕೆ ಪ್ರಯತ್ನ ಮಾಡುತ್ತಿದ್ದಾಗ ತಲೆ ಕಿಟಕಿ ಸರಳಿನಲ್ಲಿ ಸಿಲುಕಿಕೊಂಡಿದ್ದರಿಂದ ರಾತ್ರಿಯಿಡಿ ನೋವಿನಲ್ಲೇ ಕಾಲ ದೂಡಿದ್ದಾಳೆ.
ಬಳಿಕ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಜ್ಯೋತ್ಷ್ನಾಳನ್ನು ರಕ್ಷಿಸಿದ್ದಾರೆ. ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದರಿಂದ ಬೀಗ ಪಡೆದು ಬಳಿಕ ಕಿಟಕಿ ಸರಳು ಬಗ್ಗಿಸಿ ಮಗುವನ್ನು ಕಾಪಾಡಿದ್ದಾರೆ. ಇದಾದ ಬಳಿಕ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಶಾಲೆಗೆ ಮರಳಿದ್ದಾಳೆ. ಶಾಲೆಯವರು ನೀಡಿರುವ ಮಾಹಿತಿ ಪ್ರಕಾರ ಆಕೆಯ ಆರೋಗ್ಯ ಸ್ಥಿರವಾಗಿದೆ.
ಘಟನೆ ಕುರಿತು ಮಾತನಾಡಿರುವ ಮಗುವಿನ ತಾಯಿ ಜಾನು ದೇಹುರಿ, ನಾನು ಕೆಲಸದಿಂದ ರಾತ್ರಿ 9ಕ್ಕೆ ಮರಳಿದಾಗ ಮಗಳು ಎಲ್ಲಿಯೂ ಕಾಣಲಿಲ್ಲ. ಎಲ್ಲ ಕಡೆ ಹುಡುಕಾಟ ನಡೆಸಿದರೂ ಕಾಣಲಿಲ್ಲ. ಬೆಳಗಿನವರೆಗೂ ನಾವು ಕಾದರೂ ಸಿಗಲಿಲ್ಲ. ಬಳಿಕ ಶಾಲೆ ಬಳಿಗೆ ಹೋದಾಗ ಆಕೆ ಅಲ್ಲಿ ಕಂಬಿಗಳ ನಡುವೆ ಸಿಲುಕಿರುವುದು ಕಂಡು ಬಂತು ಎಂದು ಮಾಹಿತಿ ನೀಡಿದ್ದಾರೆ.