ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶೈವ ಮತ್ತು ವೈಷ್ಣವ ಪಂತಗಳ ಕುರಿತು ನಾಲಿಗೆ ಹರಿಬಿಟ್ಟ ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ಮುಡಿ ಅವರನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಉಪ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿದೆ.
ಡಿಎಂಕೆ ಮುಖ್ಯಸ್ಥ , ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಪೊನ್ಮುಡಿ ಅವರನ್ನು ಪಕ್ಷದ ಪ್ರಮುಖ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಅಧಿಕೃತ ಹೇಳಿಕೆ ನೀಡಿದ್ದಾರೆ.
ಪೊನ್ಮುಡಿ ಇತ್ತೀಚಿಗೆ ನೀಡಿದ್ದ ಶೈವ ಮತ್ತು ವೈಷ್ಣವ ಪಂತಗಳು ಹಾಗೂ ಅವುಗಳ ಧಾರ್ಮಿಕ ಗುರುತುಗಳು ಮತ್ತು ಲೈಂಗಿಕ ಕಾರ್ಯಕರ್ತರ ಕುರಿತು ನೀಡಿದ್ದ ಅವಹೇಳನಕಾರಿ ಹೇಳಿಕೆ ಸಾಕಷ್ಟು ಟೀಕೆಗೆ ಒಳಗಾಗಿದ್ದು, ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿತ್ತು.
ಡಿಎಂಕೆ ಸಂಸದೆ ಮತ್ತು ಹಿರಿಯ ನಾಯಕಿ ಕನಿಮೋಳಿ ಕೂಡ ಸಚಿವ ಪೊನ್ಮುಡಿ ಅವರ ಇತ್ತೀಚಿನ ಹೇಳಿಕೆ ಸ್ವೀಕಾರ್ಹವಲ್ಲ. ಯಾವುದೇ ಸಂದರ್ಭ ಇರಲಿ ಈ ರೀತಿಯ ಹೇಳಿಕೆ ಖಂಡನಾರ್ಹ ಎಂದು ಟೀಕಿಸಿದ್ದರು.
ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣ್ ತಿರುಪತಿ ಕೂಡ, ಪೊನ್ನುಡಿ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದ್ದರು.