ಹೈದರಾಬಾದ್‌ ಥಿಯೇಟರ್ ನಲ್ಲಿ ಕಾಲ್ತುಳಿತ: ಅಲ್ಲು ಅರ್ಜುನ್ ನನ್ನು ದೂಷಿಸುವುದು ಸರಿಯಲ್ಲ ಎಂದ ವಿಷ್ಣು ಮಂಚು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಉಂಟಾದ ಕಾಲ್ತುಳಿತದಲ್ಲಿ ಇಬ್ಬರು ಸಾವನ್ನಪ್ಪಿದ ದುರಂತ ಘಟನೆ ನಡೆದಿತ್ತು.

ಈ ಘಟನೆಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನಟ ಅಲ್ಲು ಅರ್ಜುನ್ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ದೂಷಿಸಲು ಆರಂಭಿಸಿದ್ದರು. ಈ ಆರೋಪಗಳ ವಿರುದ್ಧ ಇದೀಗ ತೆಲುಗಿನ ಖ್ಯಾತ ನಟ ವಿಷ್ಣು ಮಂಚು ಅವರು ಅಲ್ಲು ಅರ್ಜುನ್ ಪರವಾಗಿ ದನಿ ಎತ್ತಿದ್ದು, ಅವರನ್ನು ದೂಷಿಸುವುದು ಸಂಪೂರ್ಣವಾಗಿ ಅನ್ಯಾಯ ಎಂದು ಹೇಳಿದ್ದಾರೆ.

ಈ ದುರದೃಷ್ಟಕರ ಘಟನೆಯ ಬಗ್ಗೆ ಮಾತನಾಡಿದ ವಿಷ್ಣು ಮಂಚು,’ಈ ಘಟನೆ ನಿಜಕ್ಕೂ ದುಃಖಕರ. ಮೃತರ ಕುಟುಂಬಗಳಿಗೆ ನನ್ನ ಮನಃಪೂರ್ವಕವಾದ ಸಂತಾಪಗಳು. ಆದರೆ ಈ ದುರಂತಕ್ಕೆ ಅಲ್ಲು ಅರ್ಜುನ್ ಅವರನ್ನು ದೂಷಿಸುವುದು ಸರಿಯಲ್ಲ. ಅವರು ಮಾಡಿದ್ದ ತಪ್ಪಾದರೂ ಏನು? ಅವರು ತಮ್ಮಷ್ಟಕ್ಕೆ ತಾವೇ ಇದ್ದರ. ಅವರೊಬ್ಬ ದೊಡ್ಡ ಸ್ಟಾರ್, ಅವರನ್ನು ನೋಡಲು ಜನ ಸೇರುವುದು ಸಹಜ. ಆದರೆ, ಜನಸಂದಣಿಯನ್ನು ನಿಯಂತ್ರಿಸುವುದು ಮತ್ತು ಸೂಕ್ತ ಭದ್ರತೆಯನ್ನು ಒದಗಿಸುವುದು ಕಾರ್ಯಕ್ರಮದ ಆಯೋಜಕರ ಮತ್ತು ಸ್ಥಳೀಯ ಪೊಲೀಸರ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ.

ಒಬ್ಬ ನಟನನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದಾಗ, ಅಲ್ಲಿ ಸೇರುವ ಜನರನ್ನು ನಿಯಂತ್ರಿಸಲು ಬೇಕಾದ ವ್ಯವಸ್ಥೆಗಳನ್ನು ಆಯೋಜಕರೇ ಮಾಡಿಕೊಳ್ಳಬೇಕು. ಭದ್ರತಾ ವೈಫಲ್ಯಕ್ಕೆ ನಟನನ್ನು ಹೊಣೆಗಾರನನ್ನಾಗಿ ಮಾಡುವುದು ತಪ್ಪು. ಅಲ್ಲು ಅರ್ಜುನ್ ಅವರ ಜನಪ್ರಿಯತೆಯೇ ಈ ಘಟನೆಗೆ ಕಾರಣ ಎನ್ನುವುದಾದರೆ, ಅದು ಅವರ ತಪ್ಪಲ್ಲ. ಬದಲಾಗಿ, ಅವರ ಜನಪ್ರಿಯತೆಯನ್ನು ಅಂದಾಜು ಮಾಡಿ, ಅದಕ್ಕೆ ತಕ್ಕಂತೆ ಭದ್ರತಾ ವ್ಯವಸ್ಥೆ ಮಾಡಿಕೊಳ್ಳದವರ ತಪ್ಪು, ಎಂದು ಹೇಳಿದ್ದಾರೆ.

ಈ ಘಟನೆಯಿಂದ ಅಲ್ಲು ಅರ್ಜುನ್ ಅವರಿಗೂ ತೀವ್ರ ನೋವಾಗಿದೆ ಎಂದು ತಿಳಿದುಬಂದಿದೆ. ತಮ್ಮನ್ನು ನೋಡಲು ಬಂದು ಅಭಿಮಾನಿಗಳು ಪ್ರಾಣ ಕಳೆದುಕೊಂಡಿರುವುದು ಅವರನ್ನು ಮಾನಸಿಕವಾಗಿ ಘಾಸಿಗೊಳಿಸಿದೆ. ಇಂತಹ ಸಂದರ್ಭದಲ್ಲಿ, ಅವರ ಮೇಲೆ ಆರೋಪ ಹೊರಿಸುವ ಬದಲು, ಅವರಿಗೆ ನೈತಿಕ ಬೆಂಬಲ ನೀಡುವುದು ಮುಖ್ಯ ಎಂದು ವಿಷ್ಣು ಮಂಚು ಅಭಿಪ್ರಾಯಪಟ್ಟಿದ್ದಾರೆ.

ಇದೀಗ ವಿಷ್ಣು ಮಂಚು ಅವರ ಈ ಹೇಳಿಕೆಯು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೆಲೆಬ್ರಿಟಿಗಳು ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಉಂಟಾಗುವ ಅವಘಡಗಳಿಗೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ಇದು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!