ಕಾಲ್ತುಳಿತ ಪ್ರಕರಣ: ಸಿಬಿಐ ತನಿಖೆ ನಡೆಸಲು ಸಿಎಂಗೆ ಆರ್‌.ಅಶೋಕ್‌ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆರ್‌ಸಿಬಿ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಪ್ರಕರಣದಲ್ಲಿ ಸತ್ಯಾ ಸತ್ಯತೆ ತಿಳಿಯಲು ಸಿಬಿಐ ತನಿಖೆ ನಡೆಯಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು ಆಗ್ರಹಿಸಿದ್ದಾರೆ.

ಈ ಕುರಿತಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು, ಸರ್ಕಾರದ ಪ್ರಸ್ತುತ ತನಿಖಾ ಕ್ರಮಗಳಲ್ಲಿ ಜನತೆ ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ಸಿಬಿಐಗೆ ಅಧಿಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಆರ್‌.ಅಶೋಕ್‌ ಪತ್ರದಲ್ಲಿ, ಈ ದುರಂತವು ಕರ್ನಾಟಕದ ಕ್ರೀಡಾ ಇತಿಹಾಸದ ಕಪ್ಪು ಚುಕ್ಕೆಯಾಗಿದ್ದು, ರಾಜ್ಯದ ಪೊಲೀಸ್ ಇಲಾಖೆ ಮತ್ತು ಆಡಳಿತದ ಲೋಪದೃಷ್ಟಿಯಿಂದ ಈ ಘಟನೆ ಸಂಭವಿಸಿದೆ ಎಂದು ದೂರಿದ್ದಾರೆ. ಪ್ರಕರಣದಲ್ಲಿ 11 ಮಂದಿ ಅಮಾಯಕರ ಪ್ರಾಣ ಹೋದರೂ, ಸರ್ಕಾರ ಕೇವಲ ಕೆಲ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಯನ್ನು ಮುಕ್ತಾಯಗೊಳಿಸಲು ಯತ್ನಿಸುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಆರ್‌.ಅಶೋಕ್‌ ಅವರು ತಮ್ಮ ಪತ್ರದಲ್ಲಿ, ಘಟನೆಗೆ ಸಂಬಂಧಿಸಿದಂತೆ ಹಲವು ರೀತಿಯ ತನಿಖೆ ನಡೆಯುತ್ತಿದೆ. ಆದರೆ ಅದೇ ವೇಳೆ, ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ, ಬಲಿಷ್ಠರನ್ನು ರಕ್ಷಿಸಲಾಗುತ್ತಿದೆ ಎಂಬ ಮಾತುಗಳು ಹರಡುತ್ತಿವೆ. ಇಂಥ ಸಂಶಯಗಳಿಗೆ ಮುಕ್ತವಾಗಿ ಸ್ಪಷ್ಟನೆ ನೀಡುವ ಹೊಣೆ ಸರ್ಕಾರದ ಮೇಲಿದೆ, ಎಂದು ಹೇಳಿದ್ದಾರೆ.

ಅಶೋಕ್‌ ಅವರು ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಹೊರಡಿಸಿದ್ದು, ಘಟನೆಗೆ ಕಾರಣವಾದ ಲೋಪಗಳು, ಮತ್ತು ಭವಿಷ್ಯದಲ್ಲಿ ಇಂಥ ದುರ್ಘಟನೆಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ತುರ್ತು ವಿಧಾನಮಂಡಲ ಅಧಿವೇಶನ ಕರೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!