ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಪುರಿಯಲ್ಲಿ ನಡೆಯುತ್ತಿರುವ ಪ್ರಸಿದ್ಧ ಜಗನ್ನಾಥ ರಥಯಾತ್ರೆ ವೇಳೆ ಭಕ್ತರ ನಡುವೆ ಉಂಟಾದ ಕಾಲ್ತುಳಿತದಲ್ಲಿ ಮೂವರು ಸಾವಿಗೀಡಾಗಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ಪವಿತ್ರ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ನೆರೆದ ಸಂದರ್ಭ ಈ ದುರ್ಘಟನೆ ನಡೆದಿದೆ.
ಇಂದು ಮುಂಜಾನೆ 4:30ರ ಸುಮಾರಿಗೆ ಈ ಘಟನೆ ನಡೆದಿದೆ. ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಾಲಯದ ಬಳಿಯೇ ಘಟನೆ ನಡೆದಿದೆ. ರಥಗಳು ದೇವಾಲಯದ ಬಳಿಗೆ ಸಮೀಪಿಸುತ್ತಿದ್ದಂತೆಯೇ ಭಕ್ತರು ಮುಗಿಬಿದ್ದಿದ್ದರಿಂದ ಜನಸಂದಣಿ ನಿಯಂತ್ರಣ ತಪ್ಪಿ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಘಟನೆಯಲ್ಲಿ ಸಾವನ್ನಪ್ಪಿದವರನ್ನು ಖುರ್ದಾ ಜಿಲ್ಲೆಯ ಪ್ರಭಾತಿ ದಾಸ್, ಬಸಂತಿ ಸಾಹು ಮತ್ತು ಪ್ರೇಮಕಾಂತ್ ಮೊಹಂತಿ ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಡಿಶಾ ಸರ್ಕಾರ ಈ ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸೂಚನೆ ನೀಡಿದೆ.