ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ 121 ಮಂದಿ ಮೃತಪಟ್ಟಿದ್ದಾರೆ.
ಇದರ ಬೆನ್ನಲ್ಲೇ ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ನಾರಾಯಣ ಸಕಾರ್ ಹರಿ ಅಥವಾ ಸಕಾರ್ ವಿಶ್ವ ಹರಿ ಅಥವಾ ಭೋಲೆ ಬಾಬಾ ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ.
ಹತ್ರಾಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿ ಒಟ್ಟು ಆರು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಇದುವರೆಗೆ 121 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ಮುಕ್ತಾಯಗೊಂಡಿದೆ ಎಂದು ಅಲಿಗಢ ಐಜಿ ಶಾಲಾಭ್ ಮಾಥುರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಘಟನೆ ಬಳಿಕ ನಾಪತ್ತೆಯಾಗಿದ್ದ ಭೋಲೆ ಬಾಬಾ ನಂತರ ಪ್ರತ್ಯಕ್ಷರಾಗಿದ್ದು,’ನಾನು ಸತ್ಸಂಗ ಮುಗಿಸಿ ತೆರಳಿದ ಬಳಿಕ ಘಟನೆ ನಡೆದಿದೆ. ಇದು ಸಮಾಜಘಾತುಕ ಶಕ್ತಿಗಳ ಕೃತ್ಯ’ ಎಂದಿದ್ದಾರೆ. ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ.