ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಭೂಮಿಕ್ ಅವರ ಮನೆಗೆ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಬೆಂಗಳೂರಿನಲ್ಲಿಂದು ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಮುನಿರಾಜು, ಎಚ್.ಕೆ. ಸುರೇಶ್ ಉಪಸ್ಥಿತರಿದ್ದರು. ಬಳಿಕ ಆರ್. ಅಶೋಕ, ಆರ್ ಸಿಬಿ ವಿಜಯೋತ್ಸವವನ್ನು ಎರಡು- ಮೂರು ದಿನಗಳ ಕಾಲ ಮುಂದೂಡಿದ್ದರೆ ಯಾರಿಗೂ ಸಮಸ್ಯೆಯಾಗುತ್ತಿರಲಿಲ್ಲ. ಏಕಾಏಕಿ ವಿಜಯೋತ್ಸವ ಹಮ್ಮಿಕೊಂಡಿದ್ದೇ ದುರಂತಕ್ಕೆ ಕಾರಣ. ಕ್ರಿಕೆಟ್ ನ ಸಂಭ್ರಮಾಚರಣೆ ಜನರಿಗೆ ನೋವು ತಂದಿದೆ. ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಎಲ್ಲ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದರು. ಭೂಮಿಕ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು. ಆರ್ ಸಿಬಿ ವಿಜಯೋತ್ಸವ ಕಾರ್ಯಕ್ರಮವನ್ನು ನಡೆಸಬಾರದು ಎಂದು ಪೊಲೀಸರು ಸೂಚನೆ ನೀಡಿದ್ದರೂ ಅದನ್ನು ಕಡೆಗಣಿಸಿ, ಸರ್ಕಾರ ಕಾರ್ಯಕ್ರಮ ನಡೆಸಿದ್ದೇ ಅನಾಹುತಕ್ಕೆ ಕಾರಣ. ಈ ಸಂಬಂಧ ಸೂಕ್ತ ತನಿಖೆಯಾಗಬೇಕು ಎಂದು ಹೇಳಿದರು.