Tuesday, December 23, 2025

ಬೆಂಗಳೂರು–ಮಡಗಾಂವ್ ವಂದೇ ಭಾರತ್ ರೈಲು ಸೇವೆ ಆರಂಭಿಸಿ: ಕೇಂದ್ರ ರೈಲ್ವೇ ಸಚಿವರಿಗೆ HDK ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಹೈ ಸ್ಪೀಡ್ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭಿಸುವಂತೆ ಕೇಂದ್ರದ ಉಕ್ಕು ಹಾಗೂ ಭಾರಿ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ಮಂಗಳೂರು ಮೂಲಕ ಸಾಗುವ ಈ ಮಾರ್ಗದಲ್ಲಿ ಈಗಾಗಲೇ ರೈಲ್ವೇ ಲೈನ್ ವಿದ್ಯುದ್ದೀಕರಣ ಪೂರ್ಣಗೊಂಡಿರುವುದರಿಂದ, ವಂದೇ ಭಾರತ್ ರೈಲು ಸೇವೆ ಆರಂಭಿಸಲು ಇದು ಅತ್ಯಂತ ಸೂಕ್ತ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪತ್ರದಲ್ಲಿ, ಬೆಂಗಳೂರು–ಹಾಸನ–ಮಂಗಳೂರು ಜಂಕ್ಷನ್–ಉಡುಪಿ–ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದರೆ, ಕರಾವಳಿ ಕರ್ನಾಟಕ ಮತ್ತು ಗೋವಾದ ನಡುವೆ ವೇಗವಾದ ಹಾಗೂ ಆಧುನಿಕ ಸಂಪರ್ಕ ಸಾಧ್ಯವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಮಾರ್ಗವು ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ವಿವಿಧ ವರ್ಗದ ಪ್ರಯಾಣಿಕರನ್ನು ಹೊಂದಿದ್ದು, ದೈನಂದಿನ ಸಂಚಾರದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಬೆಂಗಳೂರು ಐಟಿ ರಾಜಧಾನಿಯನ್ನು ಕರಾವಳಿ ಬಂದರುಗಳು, ಪ್ರವಾಸಿ ತಾಣಗಳು ಹಾಗೂ ಗೋವಾದೊಂದಿಗೆ ಸಂಪರ್ಕಿಸುವ ಈ ರೈಲು ಸೇವೆ ಪ್ರಾದೇಶಿಕ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲಿದೆ. ಜೊತೆಗೆ ಪ್ರವಾಸೋದ್ಯಮ ವೃದ್ಧಿಗೆ ಮತ್ತು ಅಂತರ್‌ರಾಜ್ಯ ಸಂಪರ್ಕ ಬಲಪಡಿಸಲು ಸಹಕಾರಿಯಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

error: Content is protected !!