Friday, January 23, 2026
Friday, January 23, 2026
spot_img

ಬೆಂಗಳೂರಲ್ಲ, ಹಳ್ಳಿಯಿಂದಲೇ ಸಿದ್ಧವಾಗಲಿದೆ ರಾಜ್ಯ ಬಜೆಟ್: ಡಿ.ಆರ್.ಪಾಟೀಲ್ ಘೋಷಣೆ

ಹೊಸದಿಗಂತ ಚಿತ್ರದುರ್ಗ:

ರಾಜ್ಯದ ಮುಂಬರುವ 2026-27ನೇ ಸಾಲಿನ ಬಜೆಟ್ ಇನ್ನು ಮುಂದೆ ಕೇವಲ ಎಸಿ ರೂಂಗಳಲ್ಲಿ ಕುಳಿತು ಮಾಡುವ ಯೋಜನೆಯಾಗದೆ, ಹಳ್ಳಿಯ ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಕೈಗನ್ನಡಿಯಾಗಲಿದೆ ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ತಿಳಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಯೋಜನೆಗಳು ಬೆಂಗಳೂರು ಅಥವಾ ದೆಹಲಿಯಲ್ಲಿ ತಯಾರಾಗುತ್ತಿದ್ದವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯದಂತೆ, ಇನ್ನು ಮುಂದೆ ತಳಮಟ್ಟದಿಂದಲೇ ಯೋಜನೆಗಳು ಸಿದ್ಧವಾಗಲಿವೆ.

“ಪ್ರಜಾಪ್ರಭುತ್ವದಲ್ಲಿ ಗ್ರಾಮ ಸಭೆಗಳೇ ಅತ್ಯಂತ ಪ್ರಬಲ. ಅಲ್ಲಿ ಕೈಗೊಂಡ ನಿರ್ಣಯಗಳನ್ನು ಬದಲಿಸುವ ಶಕ್ತಿ ಸ್ವತಃ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಗಳಿಗೂ ಇಲ್ಲ” ಎಂದು ಪಾಟೀಲ್ ಅವರು ಗ್ರಾಮ ಸಭೆಯ ಮಹತ್ವವನ್ನು ಒತ್ತಿ ಹೇಳಿದರು.

ಗ್ರಾಮ ಪಂಚಾಯತ್‌ಗಳು ಕೇವಲ ಅಭಿವೃದ್ಧಿ ಸಂಸ್ಥೆಗಳಲ್ಲ, ಅವು ‘ಗ್ರಾಮ ಸರ್ಕಾರ’ಗಳಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರ ವಿಕೇಂದ್ರೀಕರಣದ ಮೂಲಕ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಕನಸನ್ನು ನನಸು ಮಾಡುವುದು ಸರ್ಕಾರದ ಗುರಿ. ಶಾಸಕರು ಮತ್ತು ಸ್ಥಳೀಯ ಪ್ರತಿನಿಧಿಗಳು ಕೇವಲ ಬಜೆಟ್ ಚರ್ಚೆಗೆ ಸೀಮಿತವಾಗಬಾರದು. ಯೋಜನಾ ತಯಾರಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನರ ಅಗತ್ಯಗಳಿಗೆ ಸ್ಪಂದಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ. ಸಿಇಒ ಡಾ.ಎಸ್.ಆಕಾಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಭಾಗವಹಿಸಿ, ಯೋಜನೆ ವರದಿ ಸಿದ್ಧತೆ ಹಾಗೂ ಅನುದಾನ ಹಂಚಿಕೆ ಕುರಿತು ಸಂವಾದ ನಡೆಸಿದರು.

Must Read