ಹೊಸದಿಗಂತ ವರದಿ, ಹಾವೇರಿ:
ರಾಜ್ಯ ಸಚಿವ ಸಂಪುಟ ವಿಸ್ತರಣೆಯು ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಯಾಗಿರುವ ಅರುಣಸಿಂಗ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಇರಲಿ ಬಿಡಲಿ ಎಲ್ಲರಲ್ಲಿಯೂ ಸಮಾಜ ಸೇವೆ ಮಾಡಬೇಕೆಂಬ ತುಡಿತ ವಿರುತ್ತದೆ. ರಾಜ್ಯ ಸಚಿವ ಸಂಪುಟದಲ್ಲಿ ಸೇರ್ಪಡೆ ಆಗಬೇಕೆಂಬ ಆಶೆ ಮತ್ತು ಅದರ ಮೂಲಕ ಜನ ಸೇವೆ ಮಾಡಬೇಕೆಂಬ ಇಚ್ಛೆ ಎಲ್ಲರದ್ದೂ ಆಗಿರುತ್ತದೆ. ಅಂತಹವರು ದೇಶ, ಪ್ರದೇಶದ ಅಭಿವೃದ್ಧಿಯ ತುಡಿತವನ್ನು ಇಟ್ಟುಕೊಂಡಿರುತ್ತಾರೆ ಜನ ಸೇವೆ ಎನ್ನುವುದು ಮಾತ್ರ ಅವರೆಲ್ಲರ ಧೇಯ ಆಗಿರುತ್ತದೆ ಎನ್ನುವ ಮೂಲಕ ಸಚಿವ ಸಂಪುಟದಲ್ಲಿ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿರುವ ಈಶ್ವರಪ್ಪ ಅವರ ಕುರಿತು ಕೇಳಿದ ಪ್ರಶ್ನೆಗೆ ಪ್ರತಕ್ರಿಯಿಸಿದರು.
ರಾಜ್ಯದ ಜನತೆ ಯತ್ನಾಳ ಅವರ ಹೇಳಿಕೆಗಳನ್ನು ಇಚ್ಛೆ ಪಡುವುದಿಲ್ಲ, ಅದು ಅವರ ಹ್ಯಾಬಿಟ್, ಪಕ್ಷ ಅವರಿಗೆ ನೋಟೀಸ್ ನೀಡಿದೆ. ಅವರ ಕೆಲ ಹೇಳಿಕಗಳಲ್ಲಿ ಪಕ್ಷ ಸ್ವೀಕರಿಸುವುದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ ಅದನ್ನು ಅವರು ಗಮನಿಸಬೇಕಲ್ಲವೆ. ಸ್ವಂತದ ಇಚ್ಛೆಯನ್ನು ಇಟ್ಟುಕೊಂಡು ಮಾತನಾಡುವುದು ತಪ್ಪು, ಯಡಿಯೂರಪ್ಪನವರನ್ನು ಬಿಜೆಪಿಯಲ್ಲದೆ ಎಲ್ಲ ಪಕ್ಷದವರೂ ಗೌರವಿಸುತ್ತಾರೆ. ಅವರ ಕುರಿತು ಮಾತನಾಡುವ ಸಂದರ್ಭದಲ್ಲಿ ವಿಚಾರ ಮಾಡುವುದು ಸೂಕ್ತ ಎಂದರು.
ಗುಜರಾತದಲ್ಲಿ ಸರ್ಧಾರ ವಲ್ಲಭಾಯಿ ಪಟೇಲ್ ಅವರ ಮೂರ್ತಿ, ಜಮ್ಮುಕಾಶ್ಮೀರ ಸೇರಿದಂತೆ ಇನ್ನು ಅನೇಕ ಸಮಸ್ಯೆಗಳನ್ನು ಕಾಂಗ್ರಸ್ ಸೃಷ್ಠಿಸಿ ಭಾರತವನ್ನು ವಿಭಜಿಸುವ ಕೆಲಸವನ್ನು ಮಾಡಿತು. ನೆಕ್ಸಲೈಟ್ ಸಮಸ್ಯೆಯನ್ನು ಮಾಡಿತು ರಾಹುಲ್ ಗಾಂಧಿಯವರು ಇತಿಹಾಸವನ್ನು ತಿಳಿದುಕೊಂಡು ಭಾರತ್ ಜೋಡೋ ಯಾತ್ರೆಯನ್ನು ಪ್ರಾಂಭಿಸಬೇಕಾಗಿತ್ತು ಎಂದು ಹೇಳಿದರು.
ಕೈಲಾಸ ಪರ್ವತದಲ್ಲಿ ಶಂಕರನನ್ನು ಕಾಣಬಹುದು, ಕನ್ಯಾಕುಮಾರಿಮೆ ಪಾರ್ವತಿ ದೇವಿಯನ್ನು ಕಾಣಬಹುದು. ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಏಕತೆಯಿಂದ ಭಾರತ ಎಂದೆಂದಿಗೂ ಒಂದೇ ಆಗಿದೆ ಎನ್ನುವುದು ಚಿಕ್ಕ ಮಕ್ಕಳಿಗೂ ತಿಳಿಯುತ್ತದೆ ಆದರೆ ರಾಹುಲ್ ಗಾಂಧಿ ಅವರಿಗೆ ಏಕೆ ತಿಳಿದಿಲ್ಲ ಎಂದರೆ ಅವರಿಗೆ ಏನು ಹೇಳುವುದು ಎಂದರು.
ಒಂದೇ ಕುಟುಂಬ ಪಕ್ಷವನ್ನು ನಡೆಸುವುದಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲ ಆದರೆ ಒಂದು ಕುಟುಂಭದಿಂದ ಸಮಾಜಕ್ಕೆ ಒಳಿತಾಗುತ್ತಿದ್ದರೆ ಅಂತಹ ಕುಟುಂಬದಲ್ಲಿ ಒಂದಂಕ್ಕಿಂತ ಹೆಚ್ಚು ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ನೀಡುವುದನ್ನು ಪಕ್ಷ ನಿರ್ಣಯ ತಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾದ ನಂತರವೇ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಸಮಯಾಧಾರಿತ ವಿಷಯಗಳನ್ನು ಚರ್ಚಿಸಬೇಕು. ಅವರು ಅರ್ಥವಿಲ್ಲದೆ ವಿಷಯಗಳ ಕುರಿತು ಮಾತನಾಡುತ್ತಾರೆ. ಅವರ ಕೆಲ ವಿಷಯಗಳು ರಾಜ್ಯದ ಜನತೆಯನ್ನು ಅವಮಾನಿಸುವಂತಿವೆ ಈ ಕುರಿತು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ರಾಗಾ ಅವರು ನರೇಂದ್ರ ಮೋದಿಯವರ ಕುರಿತು ಮಾತನಾಡಿದಷ್ಟು ಬಿಜೆಪಿ ಮತಗಳು ಹೆಚ್ಚುತ್ತವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಆರ್.ಶಂಕರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಇತರರಿದ್ದರು.